ಮಂಗಳೂರು: ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಮನವಿಗೆ ತುರ್ತು ಸ್ಪಂದಿಸಿರುವ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಸ್ಪಂದಿಸಿದ್ದು, ಇದೀಗ ನೈರುತ್ಯ ರೈಲ್ವೆಯು ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ ಆರಂಭಿಸಿದೆ.
ಅದರಂತೆ ಯಶವಂತಪುರ-ಮಂಗಳೂರು(06565) ವಿಶೇಷ ರೈಲು ಅ.30ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 11.45ಕ್ಕೆ ಮಂಗಳೂರು ತಲುಪಲಿದೆ. ಹಾಗೆಯೇ ಮಂಗಳೂರು-ಯಶವಂತಪುರ(ನಂ. 06566) ವಿಶೇಷ ರೈಲು ಮಂಗಳೂರಿನಿಂದ ಅ.31ರಂದು ಮಧ್ಯಾಹ್ನ 1 ಗಂಟೆಗೆ ಹೊರಟು ಅದೇ ದಿನ ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ.
ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುತ್ತಾರೆ. ಆದರೆ, ಹಬ್ಬದ ಸೀಸನ್‌ನಲ್ಲಿ ಈಗಾಗಲೇ ಪ್ರಯಾಣಿಕರ ದಟ್ಟನೆ ಜಾಸ್ತಿಯಾಗಿ ಬಸ್‌ಗಳಲ್ಲಿ ಟಿಕೆಟ್ ಲಭ್ಯವಾಗದ ಹಲವರು ಊರಿಗೆ ಬರುವುದಕ್ಕೆ ಸಾಧ್ಯವಾಗದೆ ತೊಂದರೆಗೆ ಸಿಲುಕುತ್ತಾರೆ.
ಹೀಗಾಗಿ, ದೀಪಾವಳಿ ಹಬ್ಬಕ್ಕೆ ಕರಾವಳಿ ಭಾಗದ ಜನರಿಗೆ ಅನುಕೂಲವಾಗುವಂತೆ ವಿಶೇಷ ರೈಲು ಸಂಚಾರದ ವ್ಯವಸ್ಥೆ ಮಾಡುವಂತೆ ಸಂಸದ ಕ್ಯಾ. ಚೌಟ ಅವರು ನೈರುತ್ಯ ರೈಲ್ವೆ ವಲಯಕ್ಕೆ ಹಾಗೂ ರೈಲ್ವೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದೀಗ ಮನವಿಗೆ ಶೀಘ್ರ ಸ್ಪಂದಿಸಿ ವಿಶೇಷ ರೈಲು ಸೇವೆ ಮಂಜೂರು ಮಾಡಿರುವುದಕ್ಕೆ ಕ್ಯಾ. ಚೌಟ ಅವರು ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.