image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅರ್ಮಾನ್ ಮಲ್ಲಿಕ್ ಕಂಠಸಿರಿಯಲ್ಲಿ ರಾಶಿ ಚಿತ್ರದ ಮೊದಲ ಹಾಡು ಬಿಡುಗಡೆ: ಆದಿತ್ಯ ಶಶಿಕುಮಾರ್ ನೃತ್ಯಕ್ಕೆ ಅಭಿಮಾನಿಗಳು ಫಿದಾ

ಅರ್ಮಾನ್ ಮಲ್ಲಿಕ್ ಕಂಠಸಿರಿಯಲ್ಲಿ ರಾಶಿ ಚಿತ್ರದ ಮೊದಲ ಹಾಡು ಬಿಡುಗಡೆ: ಆದಿತ್ಯ ಶಶಿಕುಮಾರ್ ನೃತ್ಯಕ್ಕೆ ಅಭಿಮಾನಿಗಳು ಫಿದಾ

ಧುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ಎಂ ಅವರು ನಿರ್ಮಿಸಿರುವ, ವಿಜಯ್ ಪಾಳೇಗಾರ್ ನಿರ್ದೇಶಿಸಿರುವ ಹಾಗೂ 'ಸುಪ್ರೀಂ ಹೀರೋ' ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ "ರಾಶಿ" ಚಿತ್ರದ ಮೊದಲ ಹಾಡು "ಮೊದಲ ಪ್ರೀತಿ" ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ.

ಚಿತ್ರದ ನಿರ್ದೇಶಕ ವಿಜಯ್ ಪಾಳೇಗಾರ್ ಅವರೇ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿರುವ ಈ ಮಧುರ ಗೀತೆಯನ್ನು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಅತ್ಯಂತ ಸೊಗಸಾಗಿ ಹಾಡಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ನಾಯಕ ಆದಿತ್ಯ ಶಶಿಕುಮಾರ್ ಈ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ತಂದೆ ಶಶಿಕುಮಾರ್ ಅವರಂತೆ ಉತ್ತಮ ನೃತ್ಯಗಾರರಾಗಿರುವ ಆದಿತ್ಯ ಅವರ ಡ್ಯಾನ್ಸ್ ನೋಡುಗರ ಮನಸೂರೆಗೊಳ್ಳುತ್ತಿದ್ದು, ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಡಿ ಬಿಟ್ಸ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ನಿರೀಕ್ಷೆಗೂ ಮೀರಿ ವೀಕ್ಷಣೆ ಹಾಗೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.

ಹಾಸ್ಯ, ಪ್ರೇಮ ಹಾಗೂ ಕೌಟುಂಬಿಕ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕ ಅಖಿಲೇಶ್ ಅವರು ಕಥೆ ಒದಗಿಸಿದ್ದು, ಚಿತ್ರಕಥೆಯನ್ನು ನಿರ್ದೇಶಕರು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಗೀತೆಗಳಿದ್ದು, ಐದು ಹಾಡುಗಳು ಸಿನಿಮಾದಲ್ಲಿರಲಿದ್ದರೆ, ಒಂದು ಪ್ರಚಾರಗೀತೆಯಾಗಿರಲಿದೆ. ಕುನಾಲ್ ಗಾಂಜಾವಾಲ, ವಿಜಯ್ ಯೇಸುದಾಸ್, ಅನುರಾಧಾ ಭಟ್, ಶರಣ್, ಮಳವಳ್ಳಿ ಮಹದೇಸ್ವಾಮಿ ಹಾಗೂ ಅಂಕಿತ್ ಮುಂತಾದ ಗಾಯಕರು ಈ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಚಿತ್ರೀಕರಣ ಸಂಪೂರ್ಣ ಮುಗಿಸಿ ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರಕ್ಕೆ ನವೀನ್ ಸೂರ್ಯ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ಮಹೇಶ್ ಸಾತನೂರು ಅವರ ಕಲಾ ನಿರ್ದೇಶನವಿದೆ.

ಆದಿತ್ಯ ಶಶಿಕುಮಾರ್ ಅವರಿಗೆ ಜೋಡಿಯಾಗಿ ಸಮೀಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ರಮೇಶ್ ಇಂದಿರಾ, ತಬಲಾ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಕರಿ ಸುಬ್ಬು, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್, ವರ್ಧನ್ ತೀರ್ಥಹಳ್ಳಿ, ಉಗ್ರಂ ರವಿ ಮತ್ತು ಭಜರಂಗಿ ಪ್ರಸನ್ನ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

Category
ಕರಾವಳಿ ತರಂಗಿಣಿ