ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ ನಮಿತ್ ಮಲ್ಹೋತ್ರಾ ಅವರ ʻರಾಮಾಯಣ: ಪಾರ್ಟ್ 1’ ಚಿತ್ರದ ಅಧಿಕೃತ ಟ್ರೇಲರ್ ಜಾಗತಿಕವಾಗಿ ಬಿಡುಗಡೆಯಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಐದು ಪ್ರಮುಖ ಭಾರತೀಯ ಭಾಷೆಗಳಲ್ಲಿ ಈ ರೋಮಾಂಚಕಾರಿ ಟ್ರೇಲರ್ ಅನಾವರಣಗೊಂಡಿದೆ.
ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ 'ಪ್ರೈಮ್ ಫೋಕಸ್ ಸ್ಟುಡಿಯೋಸ್', ಎಂಟು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್‌ಎಕ್ಸ್ ಸ್ಟುಡಿಯೋ 'DNEG' ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಜಂಟಿಯಾಗಿ ನಿರ್ಮಿಸಿವೆ. ಈ ಮಹಾಕಾವ್ಯವು 2026ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶ್ವದಾದ್ಯಂತ ಭವ್ಯವಾಗಿ ಬಿಡುಗಡೆಯಾಗಲಿದ್ದು, ಜಾಗತಿಕ ವಿತರಣೆಯನ್ನು 'ಸೋನಿ ಪಿಕ್ಚರ್ಸ್' ಹಾಗೂ ಉತ್ತರ ಭಾರತದ ವಿತರಣೆಯನ್ನು 'ಧರ್ಮ ಪ್ರೊಡಕ್ಷನ್ಸ್' ವಹಿಸಿಕೊಂಡಿವೆ.
ಸೃಷ್ಟಿಯ ಆರಂಭದಿಂದಲೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಮೂರು ಲೋಕಗಳನ್ನು ಆಳುತ್ತಿದ್ದು, ಧರ್ಮ-ಅಧರ್ಮಗಳ ನಡುವಿನ ಸಮತೋಲನ ತಪ್ಪಿದಾಗ ಶ್ರೀಮಹಾ ವಿಷ್ಣುವು ರಾಮನಾಗಿ ಭೂಮಿಯಲ್ಲಿ ಅವತರಿಸುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಅಜೇಯ, ಅಮರ ಹಾಗೂ ಅಹಂಕಾರದಿಂದ ಬ್ರಹ್ಮಾಂಡವನ್ನೇ ನಡುಗಿಸುವ ಅಸುರ ಚಕ್ರವರ್ತಿ ರಾವಣನ ವಿರುದ್ಧ ರಾಮನು ನಡೆಸುವ ಧರ್ಮಯುದ್ಧವೇ ಈ ಸಿನಿಮಾದ ಜೀವಾಳವಾಗಿದೆ.
ಈ ಚಿತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದರೆ, ಪ್ಯಾನ್-ಇಂಡಿಯಾ ಸ್ಟಾರ್ 'ರಾಕಿಂಗ್ ಸ್ಟಾರ್' ಯಶ್ ಬಲಶಾಲಿ ರಾವಣನ ಪಾತ್ರದಲ್ಲಿ ನಟಿಸುವುದರ ಜೊತೆಗೆ ಸಹ-ನಿರ್ಮಾಪಕರಾಗಿದ್ದಾರೆ. ಸೀತಾ ಮಾತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ, ರಾಜ ದಶರಥನಾಗಿ ಅರುಣ್ ಗೋವಿಲ್, ಕೈಕೇಸಿಯಾಗಿ ಶೋಭನಾ, ಋಷಿ ವಿಶ್ವಾಮಿತ್ರನಾಗಿ ಅಜಿಂಕ್ಯ ದೇವ್, ಇಂದ್ರ ದೇವನಾಗಿ ಕುನಾಲ್ ಕಪೂರ್ ಹಾಗೂ ಶೂರ್ಪನಖಿಯಾಗಿ ರಾಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ.
ಚಿತ್ರಕ್ಕೆ ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ದಿಗ್ಗಜರಾದ ಎ.ಆರ್. ರೆಹಮಾನ್ ಮತ್ತು ಹಾಲಿವುಡ್ ಖ್ಯಾತಿಯ ಹ್ಯಾನ್ಸ್ ಜಿಮ್ಮರ್ ಒಟ್ಟಾಗಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರಾಮಾಯಣವು ಕೇವಲ ಒಂದು ಮಹಾಕಾವ್ಯವಲ್ಲದೆ, ನಮ್ಮ ಜೀವನಶೈಲಿ ಹಾಗೂ ಮೌಲ್ಯಗಳ ಸಂಕೇತವಾಗಿದೆ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ತಿಳಿಸಿದ್ದಾರೆ.