image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹೊಸ ಸಾಮಾಜಿಕ ಕಥೆಯೊಂದಿಗೆ ವಿಜಯಕುಮಾರ್ ಕೊಡಿಯಾಲ್ ಬೈಲ್: ರಂಗಭೂಮಿಯಲ್ಲಿ ಮಿಂಚಲಿದ್ದಾಳೆ 'ಶ್ರೀಮತಿ ಸತ್ಯಭಾಮ'

ಹೊಸ ಸಾಮಾಜಿಕ ಕಥೆಯೊಂದಿಗೆ ವಿಜಯಕುಮಾರ್ ಕೊಡಿಯಾಲ್ ಬೈಲ್: ರಂಗಭೂಮಿಯಲ್ಲಿ ಮಿಂಚಲಿದ್ದಾಳೆ 'ಶ್ರೀಮತಿ ಸತ್ಯಭಾಮ'

ಮಂಗಳೂರು: ​ತುಳು ರಂಗಭೂಮಿಯ ಬದಲಾವಣೆಯ ಹರಿಕಾರ ಹಾಗೂ ಹೊಸತನದ ರೂವಾರಿ ಎಂದೇ ಖ್ಯಾತಿ ಪಡೆದಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ದೀರ್ಘಕಾಲದ ಬಳಿಕ ಮತ್ತೆ ಸಾಮಾಜಿಕ ನಾಟಕದ ಕಡೆಗೆ ಮುಖ ಮಾಡಿದ್ದು, ಕಲಾಸಂಗಮದ ಲಾಂಛನದಲ್ಲಿ "ಶ್ರೀಮತಿ ಸತ್ಯಭಾಮ" ಎಂಬ ಹೊಸ ನಾಟಕವನ್ನು ಪ್ರೇಕ್ಷಕರ ಮುಂದೆ ತರಲು ಸಿದ್ಧತೆ ನಡೆಸಿದ್ದಾರೆ.

​"ಕೈಲಾಸ - ವೈಕುಂಠ ತಿರ್ಗ್ ದ್ ಕಲಾಸಂಗಮ ಕುಡ ಭೂಲೋಕೊಗು" ಎಂಬ ವಿಭಿನ್ನ ಘೋಷವಾಕ್ಯದೊಂದಿಗೆ ಈ ತಂಡವು ಮತ್ತೆ ಸಾಮಾಜಿಕ ಕಥಾಹಂದರಕ್ಕೆ ಮರಳಿದೆ. ಈ ಹಿಂದೆ 'ಒರಿಯರ್ದೊರಿ ಅಸಲ್', 'ಮದಿಮೆ', 'ಕುಟುಂಬ', 'ಕೋಡೆ - ಇನಿ - ಎಲ್ಲೆ', 'ಮೈತಿದಿ' ಮುಂತಾದ ಜನಪ್ರಿಯ ಸಾಮಾಜಿಕ ನಾಟಕಗಳ ಮೂಲಕ ಜನರ ಮನಗೆದ್ದಿದ್ದ ಕೊಡಿಯಾಲ್ ಬೈಲ್, ಇತ್ತೀಚಿನ ವರ್ಷಗಳಲ್ಲಿ 'ಶಿವದೂತೆ ಗುಳಿಗೆ' ಹಾಗೂ 'ಛತ್ರಪತಿ ಶಿವಾಜಿ'ಯಂತಹ ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳ ಮೂಲಕ ಅಪಾರ ಯಶಸ್ಸು ಗಳಿಸಿದ್ದರು. ಈಗ ಸಂಪೂರ್ಣ ಹೊಸತನದೊಂದಿಗೆ "ಶ್ರೀಮತಿ ಸತ್ಯಭಾಮ" ನಾಟಕದ ಮೂಲಕ ಸಾಮಾಜಿಕ ರಂಗಭೂಮಿಗೆ ಭರ್ಜರಿ ಕಂಬ್ಯಾಕ್ ಮಾಡುತ್ತಿದ್ದಾರೆ.
​ಈ ನಾಟಕದ ಪೋಸ್ಟರ್‌ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, 'ಬಾರ್ನ್ ಟು ರೂಲ್' (Born to Rule) ಎಂಬ ಅಡಿಬರಹದೊಂದಿಗೆ ಬಿಡುಗಡೆಯಾಗಿರುವ ಟೈಟಲ್ ಪೋಸ್ಟರ್ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ವಿಶೇಷವಾಗಿ ನಾಟಕದಲ್ಲಿ 'ಸತ್ಯಭಾಮ' ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಯಾರು ಎಂಬ ರಹಸ್ಯವನ್ನು ಸದ್ಯಕ್ಕೆ ಬಿಟ್ಟುಕೊಡದೆ ತಂಡವು ನಿಗೂಢತೆಯನ್ನು ಕಾಯ್ದುಕೊಂಡಿದೆ.  

ಅದ್ದೂರಿ ಸೆಟ್ಟಿಂಗ್ ಹಾಗೂ ಅತ್ಯಾಧುನಿಕ ತಾಂತ್ರಿಕತೆಯ ಬಳಕೆಗೆ ಹೆಸರುವಾಸಿಯಾಗಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್, ಈ ಬಾರಿಯ ನಾಟಕದಲ್ಲೂ ದೃಶ್ಯ ವೈಭವಕ್ಕೆ ಯಾವುದೇ ಕೊರತೆಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ನಾಟಕಕ್ಕೆ ಕಲಾಸಂಗಮದ ಖಾಯಂ  ಸಂಗೀತ ನಿರ್ದೇಶಕ ಎ.ಕೆ. ವಿಜಯ್ ಕೋಕಿಲಾ ಅವರು ಎಂದಿನಂತೆ ಸಂಗೀತ ಸಂಯೋಜನೆ ನೆರವೇರಿಸಿದ್ದಾರೆ.

ಸದ್ಯ ನಾಟಕದ ರಚನೆ ಹಾಗೂ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ತಂಡವು, ಅಕ್ಟೋಬರ್ ತಿಂಗಳ ಕೊನೆಯಲ್ಲಿ ರಂಗು ರಂಗಿನ ಪ್ರದರ್ಶನಕ್ಕೆ ಸಜ್ಜಾಗಲಿದೆ. ಪ್ರವಾಸದ ಹಾದಿಯಲ್ಲಿ ಸಾಗುವ ಈ ನಾಟಕವು ನವೆಂಬರ್ 1 ರಂದು ರವಿವಾರ ಸಂಜೆ ಸುರತ್ಕಲ್‌ನಲ್ಲಿ ಪ್ರದರ್ಶನಗೊಳ್ಳುವ ಮೂಲಕ ಪ್ರೇಕ್ಷಕರ ಅಧಿಕೃತ ಭೇಟಿಗೆ ಆಗಮಿಸಲಿದೆ ಎಂದು ತಂಡ ತಿಳಿಸಿದೆ.

Category
ಕರಾವಳಿ ತರಂಗಿಣಿ