image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ಅವೆಂಜರ್ಸ್: ಡೂಮ್ಸ್‌ಡೇ' VFX ಗೆ ನೆಟ್ಟಿಗರ ಟೀಕೆ: 'ರಾಮಾಯಣ' ದೃಶ್ಯ ವೈಭವಕ್ಕೆ ಪ್ರಶಂಸೆ

'ಅವೆಂಜರ್ಸ್: ಡೂಮ್ಸ್‌ಡೇ' VFX ಗೆ ನೆಟ್ಟಿಗರ ಟೀಕೆ: 'ರಾಮಾಯಣ' ದೃಶ್ಯ ವೈಭವಕ್ಕೆ ಪ್ರಶಂಸೆ

ಮುಂಬೈ : ಮಾರ್ವೆಲ್ ಸ್ಟುಡಿಯೋಸ್ ತನ್ನ ಬಹುನಿರೀಕ್ಷಿತ 'ಅವೆಂಜರ್ಸ್: ಡೂಮ್ಸ್‌ಡೇ' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ರಾಬರ್ಟ್ ಡೌನಿ ಜೂನಿಯರ್ ಖಳನಾಯಕ 'ಡಾಕ್ಟರ್ ಡೂಮ್' ಪಾತ್ರದಲ್ಲಿ ಮರಳುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆಯಾದರೂ, ಟ್ರೇಲರ್‌ನಲ್ಲಿನ ದೃಶ್ಯ ವೈಭವ (VFX) ಮತ್ತು ಕಂಪ್ಯೂಟರ್ ಗ್ರಾಫಿಕ್ಸ್ (CGI) ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.

ಟ್ರೇಲರ್ ವೀಕ್ಷಿಸಿದ ಹಲವು ನೆಟ್ಟಿಗರು ಮಾರ್ವೆಲ್‌ನ ಈ ಹಿಂದಿನ 'ಇನ್ಫಿನಿಟಿ ವಾರ್' ಹಾಗೂ 'ಎಂಡ್‌ಗೇಮ್' ಸಿನಿಮಾಗಳಿಗೆ ಹೋಲಿಸಿದರೆ ಇದರಲ್ಲಿ ದೃಶ್ಯ ಗುಣಮಟ್ಟ ತೀರ ಸಾಧಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಕ್ಲೋಸ್‌ಅಪ್ ದೃಶ್ಯಗಳಲ್ಲಿ ಗ್ರೀನ್ ಸ್ಕ್ರೀನ್ ಕೆಲಸ ಅಪೂರ್ಣವಾಗಿ ಕಾಣುತ್ತಿದ್ದು, 2012ರ ಹಳೆಯ ವಿಡಿಯೊ ಗೇಮ್‌ಗಳ ಸಿಜಿಐ ಮಾದರಿಯಲ್ಲಿದೆ ಹಾಗೂ ಕೃತಕ ಬೆಳಕಿನ ವಿನ್ಯಾಸದಿಂದ ದೃಶ್ಯಗಳು ಜೀವ ಕಳೆದುಕೊಂಡಿವೆ ಎಂದು ಟೀಕಿಸಿದ್ದಾರೆ.

ಈ ಚರ್ಚೆಯ ಬೆನ್ನಲ್ಲೇ ಭಾರತೀಯ ಸಿನಿಪ್ರೇಕ್ಷಕರು 'ಅವೆಂಜರ್ಸ್' ಟ್ರೇಲರ್ ಅನ್ನು ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ದೃಶ್ಯಗಳೊಂದಿಗೆ ಹೋಲಿಕೆ ಮಾಡಲು ಪ್ರಾರಂಭಿಸಿದ್ದಾರೆ. 'ರಾಮಾಯಣ' ಚಿತ್ರದ ಮೊದಲ ನೋಟ ಹಾಗೂ ಲೀಕ್ ಆದ ಪ್ರಿವ್ಯೂ ದೃಶ್ಯಗಳು ಹಾಲಿವುಡ್‌ಗಿಂತಲೂ ಹೆಚ್ಚು ಶ್ರೀಮಂತ ಹಾಗೂ ಆಕರ್ಷಕವಾಗಿ ಕಾಣುತ್ತಿವೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹಾಲಿವುಡ್‌ನ ಬೃಹತ್ ಬಜೆಟ್ ಚಿತ್ರಕ್ಕಿಂತ ಭಾರತೀಯ ಸಿನಿಮಾದ ದೃಶ್ಯಗಳು ಹೆಚ್ಚು ಪ್ರಭಾವಶಾಲಿಯಾಗಿವೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಆಂಥನಿ ಮತ್ತು ಜೋ ರುಸ್ಸೋ ನಿರ್ದೇಶನದ 'ಅವೆಂಜರ್ಸ್: ಡೂಮ್ಸ್‌ಡೇ' ಚಿತ್ರದಲ್ಲಿ ಕ್ರಿಸ್ ಇವಾನ್ಸ್, ಕ್ರಿಸ್ ಹೆಮ್ಸ್‌ವರ್ಥ್, ಟಾಮ್ ಹಿಡ್‌ಲ್‌ಸ್ಟನ್ ಹಾಗೂ ಪೆಡ್ರೊ ಪಾಸ್ಕಲ್ ಪ್ರಮುಖ ಪಾತ್ರಗಳಲ್ಲಿದ್ದು, ಈ ಸಿನಿಮಾ ಡಿಸೆಂಬರ್ 18ರಂದು ಬಿಡುಗಡೆಯಾಗಲಿದೆ. ಇನ್ನೊಂದೆಡೆ, ರಣಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತೆ) ಹಾಗೂ ಯಶ್ (ರಾವಣ) ಅಭಿನಯದ 'ರಾಮಾಯಣ' ಮೊದಲ ಭಾಗವು ದೀಪಾವಳಿ 2026ರ ಸಂದರ್ಭದಲ್ಲಿ ವಿಶ್ವದಾದ್ಯಂತ ತೆರೆಕಾಣಲಿದೆ.

Category
ಕರಾವಳಿ ತರಂಗಿಣಿ