ಮಂಗಳೂರು: ಬದುಕಿನ ಹಾದಿ ಸಾಗುವ ದಾರಿ ಹೇಗಿರುತ್ತದೆ ಎಂಬುದನ್ನು ಯಾರೂ ಮುಂಚಿತವಾಗಿ ಊಹಿಸಲು ಸಾಧ್ಯವಿಲ್ಲ. ಬಡತನ, ಸಣ್ಣಪುಟ್ಟ ಆಸೆಗಳು ಹಾಗೂ ಆಕಸ್ಮಿಕಗಳು ಕೆಲವೊಮ್ಮೆ ವ್ಯಕ್ತಿಯೊಬ್ಬರ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತವೆ. ವಾರ್ಕಾಡಿ ಎಂಬ ಪುಟ್ಟ ಹಳ್ಳಿಯಿಂದ ಬಂದ ಸಾಮಾನ್ಯ ಹುಡುಗಿ 'ರೂಪಶ್ರೀ" ಅವರ ಕಥೆಯೂ ಇದಕ್ಕೆ ಹೊರತಲ್ಲ. 9ನೇ ತರಗತಿಯಲ್ಲಿ ಓದುತ್ತಿದ್ದಾಗ, ಊರಿನ ನಾಟಕ ತಂಡವೊಂದಕ್ಕೆ ತುರ್ತಾಗಿ ನಟಿಯ ಅವಶ್ಯಕತೆ ಎದುರಾದಾಗ ಅವರು ರಂಗಭೂಮಿಗೆ ಹೆಜ್ಜೆ ಇಟ್ಟಿದ್ದರು. ಒಂದು ತಿಂಗಳ ನಾಟಕದ ಕ್ಯಾಂಪ್ ಮುಗಿದ ಬಳಿಕ ಕೈ ಸೇರಿದ್ದ 500 ರೂಪಾಯಿಗಳ ಸಂಭಾವನೆ ಆಕೆಗೆ ತಂದ ಅಚ್ಚರಿ ಮತ್ತು ಖುಷಿ ಅಷ್ಟಿಷ್ಟಲ್ಲ. ಅಂದಿನ ಆ ಚಿಕ್ಕ ಮೊತ್ತದ ಆಸೆಯೇ ಅವರನ್ನು ಕಲೆಯ ಲೋಕದಲ್ಲಿ ಮುನ್ನಡೆದು ರಾಷ್ಟ್ರ ಮಟ್ಟಕ್ಕೆ ತಲುಪಿಸಿದೆ.
ಕಾಲಕ್ರಮೇಣ ಹಣದ ಆಸೆಯಾಗಿ ಆರಂಭವಾದ ಒಲವು, ನಟನೆಯ ಮೇಲಿನ ಅಪ್ಪಟ ಪ್ರೀತಿಯಾಗಿ ರೂಪಾಂತರಗೊಂಡಿತು. ಕಳೆದ ಎರಡು ದಶಕಗಳಿಂದ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ರೂಪಶ್ರೀ ಅವರು, ತುಳು, ಬ್ಯಾರಿ, ಕೊಂಕಣಿ, ಹವ್ಯಕ ಹಾಗೂ ಕನ್ನಡ ಭಾಷೆಗಳಲ್ಲಿ ಒಟ್ಟು 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಗುರುತಿಸಿಕೊಂಡಿದ್ದಾರೆ. 'ಬಿರ್ಸೆ, 'ಬ್ಯಾರಿ', 'ಒಂದು ಮೊಟ್ಟೆಯ ಕಥೆ', 'ಸೈಕೋ' ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಅವರು, ಸಣ್ಣಪುಟ್ಟ ಪಾತ್ರಗಳಿಗೂ ಸಂಪೂರ್ಣ ಪ್ರಾಮಾಣಿಕತೆಯನ್ನು ತೋರಿದ್ದು, ಇಂದು ಮಿಥ್ಯ ಚಿತ್ರದ ಇವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಸಂದಿದೆ.
'ಮಿಥ್ಯಾ' ಕನ್ನಡ ಸಿನಿಮಾದಲ್ಲಿನ ಅವರ ಪಾತ್ರ ಅತ್ಯಂತ ಸವಾಲಿನಿಂದ ಕೂಡಿದ್ದು, ತಾಯಿಯೊಬ್ಬಳ ಜವಾಬ್ದಾರಿ, ಅಕ್ಕರೆ ಮತ್ತು ನೋವನ್ನು ಬಹಳ ಸಹಜವಾಗಿ ತೆರೆಮೇಲೆ ತರಬೇಕಿತ್ತು. ನಿರ್ದೇಶಕ ಸುಮಂತ್ ಅವರು ವರ್ಕ್‌ಶಾಪ್‌ಗೆ ಕರೆದಾಗ ಆರಂಭದಲ್ಲಿ ಸಮಯದ ಹೊಂದಾಣಿಕೆ ಮತ್ತು ಪಾತ್ರದ ತೂಕದ ಬಗ್ಗೆ ಆತಂಕವಿತ್ತು. ಆದರೆ ವರ್ಕ್‌ಶಾಪ್‌ನಲ್ಲಿ ಭಾಗವಹಿಸಿದ ಮೇಲೆಯೇ ಆ ಪಾತ್ರದ ಆಳ ಹಾಗೂ ಗಂಭೀರತೆ ಅರ್ಥವಾಯಿತು. 'ಆಕ್ಟಿಂಗ್ ಮಾಡಬೇಡಿ, ಸಹಜವಾಗಿ ಇರಿ' ಎಂಬ ನಿರ್ದೇಶಕರ ಮಾತನ್ನು ಮೈಗೂಡಿಸಿಕೊಂಡು, ತಮ್ಮ ಶೈಲಿಗೆ ಸಂಪೂರ್ಣ ಭಿನ್ನವಾದ ಪಾತ್ರಕ್ಕೆ ಅವರು ಜೀವ ತುಂಬಿದರು ಎಂದು ಸ್ಮರಿಸಿಕೊಳ್ಳುತ್ತಾರೆ ರೂಪಶ್ರೀ.
ಚಿತ್ರತಂಡದವರು ಫೋನ್ ಮಾಡಿ ರಾಷ್ಟ್ರೀಯ ಪ್ರಶಸ್ತಿ ಬಂದಿರುವ ಸುದ್ದಿಯನ್ನು ತಿಳಿಸಿದಾಗ ರೂಪಶ್ರೀ ಅವರಿಗೆ ದೊಡ್ಡ ಶಾಕ್ ಆಗಿತ್ತು. ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿಯೊಬ್ಬರಿಗೆ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದು ಅತ್ಯಂತ ಅಪರೂಪದ ಗೌರವವಾಗಿದೆ. ಇದಕ್ಕೆ ದೇವರ ಆಶೀರ್ವಾದ ಹಾಗೂ ಪ್ರೇಕ್ಷಕರ ಪ್ರೀತಿಯ ಫಲ ಎಂದು ಗದ್ಗದಿತರಾಗುತ್ತಾರೆ.