image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ರಾಮಾಯಣ' ಸಿನಿಮಾಗೆ ಆಸ್ಟ್ರೇಲಿಯಾದಲ್ಲಿ 'M' ರೇಟಿಂಗ್!

'ರಾಮಾಯಣ' ಸಿನಿಮಾಗೆ ಆಸ್ಟ್ರೇಲಿಯಾದಲ್ಲಿ 'M' ರೇಟಿಂಗ್!

ಆಸ್ಟ್ರೇಲಿಯ : ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಮುಂತಾದ ಸ್ಟಾರ್ ನಟರು ಅಭಿನಯಿಸಿರುವ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಸದ್ಯ ಜಾಗತಿಕ ಮಟ್ಟದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಶೀಘ್ರದಲ್ಲೇ ಈ ಸಿನಿಮಾದ ಅಧಿಕೃತ ಟ್ರೇಲರ್ ಅದ್ದೂರಿಯಾಗಿ ಲಾಂಚ್ ಆಗಲಿದ್ದು, ಇದಕ್ಕೂ ಮುನ್ನ ಚಿತ್ರತಂಡಕ್ಕೆ ಸಂಬಂಧಿಸಿದಂತೆ ಒಂದು ಪ್ರಮುಖ ಮಾಹಿತಿ ಹೊರಬಿದ್ದಿದೆ. ಆಸ್ಟ್ರೇಲಿಯಾದ ಸೆನ್ಸಾರ್ ಮಂಡಳಿಯು ಈ ಚಿತ್ರದ ಸ್ಪೆಷಲ್ ವಿಡಿಯೋ ಪ್ಯಾಕೇಜ್‌ಗೆ 'M' (Mature) ರೇಟಿಂಗ್ ನೀಡಿದೆ. ಆಸ್ಟ್ರೇಲಿಯಾದ ಸೆನ್ಸಾರ್ ಮಂಡಳಿಯ ವೆಬ್‌ಸೈಟ್ ನೀಡಿರುವ ಮಾಹಿತಿ ಪ್ರಕಾರ, ಈ ಚಿತ್ರದ ವಿಶೇಷ ವಿಡಿಯೋ ತುಣುಕಿನಲ್ಲಿ ಮಧ್ಯಮ ಪ್ರಮಾಣದ ಹಿಂಸಾಚಾರ ಇರುವುದರಿಂದ ಇದಕ್ಕೆ 'M' ರೇಟಿಂಗ್ ನೀಡಲಾಗಿದೆ. ಆಸ್ಟ್ರೇಲಿಯಾದ ನಿಯಮಗಳ ಪ್ರಕಾರ, 'M' ರೇಟಿಂಗ್ ಹೊಂದಿರುವ ಸಿನಿಮಾಗಳನ್ನು 15 ವರ್ಷದೊಳಗಿನ ಮಕ್ಕಳು ವೀಕ್ಷಿಸುವುದನ್ನು ಶಿಫಾರಸು ಮಾಡುವುದಿಲ್ಲ. ಆದರೆ, ಇದು ಕೇವಲ ಒಂದು ಸಲಹೆಯಾಗಿದ್ದು, ಕಾನೂನುಬದ್ಧವಾಗಿ ಮಕ್ಕಳು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದಕ್ಕೆ ಯಾವುದೇ ನಿಷೇಧ ಇರುವುದಿಲ್ಲ. ಪೋಷಕರ ಮಾರ್ಗದರ್ಶನದಲ್ಲಿ ಮಕ್ಕಳು ಇದನ್ನು ವೀಕ್ಷಿಸಬಹುದಾಗಿದೆ.

ಸೆನ್ಸಾರ್ ಮಂಡಳಿಯ ವೆಬ್‌ಸೈಟ್‌ನಲ್ಲಿ ಚಿತ್ರದ ಸಂಕ್ಷಿಪ್ತ ಕಥೆಯನ್ನು ಬರೆಯಲಾಗಿದೆ. 'ಇದು ಯುವ ರಾಜಕುಮಾರ ಮತ್ತು ರಾಜಕುಮಾರಿಯ ಪುರಾತನ ಮಹಾಕಾವ್ಯವಾಗಿದೆ. ಇವರ ವಿವಾಹ ಮತ್ತು ತದನಂತರದ ವನವಾಸವು ಒಂದು ಐತಿಹಾಸಿಕ ಪ್ರಯಾಣಕ್ಕೆ ನಾಂದಿ ಹಾಡುತ್ತದೆ. ಕರ್ತವ್ಯ, ಪ್ರೀತಿ ಮತ್ತು ವಿಧಿಯ ಈ ಕಥೆಯು ಮುಂದೆ ಎದುರಾಗಲಿರುವ ದೊಡ್ಡ ಸವಾಲುಗಳಿಗೆ ಸಾಕ್ಷಿಯಾಗಲಿದೆ' ಎಂದು ಅಲ್ಲಿ ವಿವರ ನೀಡಲಾಗಿದೆ. ಮತ್ತೊಂದೆಡೆ, ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು 'ರಾಮಾಯಣ: ಪಾರ್ಟ್ 1' ಚಿತ್ರವನ್ನು ಚೀನಾದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ. 2020ರ ನಂತರ ಚೀನಾದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಸೂಕ್ತ ಮಾರುಕಟ್ಟೆ ಸಿಕ್ಕಿರಲಿಲ್ಲ. ಆದರೆ, ರಾಮಾಯಣ ಚಿತ್ರದ ಮೂಲಕ ಚೀನಾ ಮಾರುಕಟ್ಟೆಯನ್ನು ಮತ್ತೊಮ್ಮೆ ವಶಪಡಿಸಿಕೊಳ್ಳಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಘೋಷಣೆ ಮಾಡಿರುವಂತೆ, 'ರಾಮಾಯಣ' ಚಿತ್ರತಂಡವು ಜುಲೈ 24ರಂದು ಜಾಗತಿಕವಾಗಿ ಸಿನಿಮಾದ ಅಧಿಕೃತ ಟ್ರೇಲರ್ ಬಿಡುಗಡೆ ಮಾಡಲಿದೆ. ಅದಕ್ಕೂ ಮುನ್ನ ದೆಹಲಿಯಲ್ಲಿ ದೊಡ್ಡ ಇವೆಂಟ್ ನಡೆಸುವ ಪ್ಲ್ಯಾನ್ ಕೂಡ ಇದೆ ಎನ್ನಲಾಗಿದೆ. ಈ ಸಿನಿಮಾದ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Category
ಕರಾವಳಿ ತರಂಗಿಣಿ