ಭಾರತೀಯ ಚಿತ್ರರಂಗದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಫೌಜಿ'ಯ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ನಿರ್ದೇಶಕ ಹನು ರಾಘವಪುಡಿ ಅವರ ಮಹತ್ವಾಕಾಂಕ್ಷೆಯ ಈ ಚಿತ್ರವು ಡಿಸೆಂಬರ್ 3, 2026ರಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.
'ಅಜ್ಞಾತಪರ್ವ ಎಂಡ್ಸ್' ಎಂಬ ಕುತೂಹಲಕಾರಿ ಘೋಷಣೆಯೊಂದಿಗೆ, ಚಿತ್ರತಂಡವು 'ದಿ ರೆಬೆಲಿಯನ್ ಬಿಗಿನ್ಸ್' ಎಂಬ ಟ್ಯಾಗ್‌ಲೈನ್ ಹಂಚಿಕೊಂಡಿದ್ದು, ಇದು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ರಕ್ತಸಿಕ್ತ ಉಡುಪಿನಲ್ಲಿ, ಗನ್ ಹಿಡಿದು ಗಂಭೀರವಾಗಿ ಕುಳಿತಿರುವ ಪ್ರಭಾಸ್ ಅವರ ಫಸ್ಟ್ ಲುಕ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 'ಬಾಹುಬಲಿ'ಯ ನಂತರ ಮತ್ತೊಂದು ಬೃಹತ್ ಪೀರಿಯಡ್ ಡ್ರಾಮಾದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದು, "ಎ ಬೆಟಾಲಿಯನ್ ಹೂ ಫೈಟ್ಸ್ ಅಲೋನ್" ಎಂಬ ಅಡಿಬರಹದೊಂದಿಗೆ ಈ ಸಿನಿಮಾ ಬರಲಿದೆ.
ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯರ್ನೇನಿ ಮತ್ತು ವೈ. ರವಿ ಶಂಕರ್ ಅವರು ಟಿ-ಸೀರೀಸ್ ಫಿಲ್ಮ್ಸ್‌ನ ಭೂಷಣ್ ಕುಮಾರ್ ಅವರೊಂದಿಗೆ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇದು ಭಾರತೀಯ ಚಿತ್ರರಂಗದ ದೈತ್ಯ ಸಂಸ್ಥೆಗಳ ಸಮ್ಮಿಲನವಾಗಿರುವುದರಿಂದ ಸಹಜವಾಗಿಯೇ ಚಿತ್ರದ ಮೇಲೆ ಭಾರಿ ಕ್ರೇಜ್ ಸೃಷ್ಟಿಯಾಗಿದೆ. ಅತ್ಯುನ್ನತ ಗುಣಮಟ್ಟದ ತಾಂತ್ರಿಕ ಮೌಲ್ಯಗಳು, ಭಾವನಾತ್ಮಕ ಕಥಾಹಂದರ ಮತ್ತು ಅದ್ಭುತ ದೃಶ್ಯ ವೈಭವವನ್ನು ಹೊಂದಿರುವ ಈ ಐತಿಹಾಸಿಕ ಪ್ರಯಾಣವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಡಿಸೆಂಬರ್ 3ರವರೆಗೆ ಕಾತರದಿಂದ ಕಾಯುತ್ತಿದ್ದಾರೆ.