ಬೆಂಗಳೂರು:/ಕನ್ನಡ ಚಿತ್ರರಂಗದಲ್ಲಿ ‘ಜಟ್ಟ’ ಮತ್ತು ‘ಮೈತ್ರಿ’ಯಂತಹ ಅರ್ಥಪೂರ್ಣ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಬಿ. ಎಂ. ಗಿರಿರಾಜ ಅವರು, ಇದೀಗ ‘ಕಲ್ಯಾಣಿ’ ಎಂಬ ಹೊಸ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಲೇಖಕ ಬಸವ ರೆಡ್ಡಿ ಅವರ ಕಥಾಹಂದರವನ್ನು ಆಧರಿಸಿರುವ ಈ ಚಿತ್ರದ ಶೀರ್ಷಿಕೆ ಮತ್ತು ಮೋಶನ್ ಪೋಸ್ಟರ್ ಅನ್ನು ಇತ್ತೀಚೆಗೆ ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿದೆ. ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡವು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.
‘ಆರ್. ಕೆ. ಸಿನೆಮಾಸ್’ ಬ್ಯಾನರ್ ಅಡಿಯಲ್ಲಿ ಕುಮಾರಸ್ವಾಮಿ ಆರ್. ಅವರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಯುವ ನಟ ಸಾಮ್ರಾಟ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಉತ್ತರ ಭಾರತದ ನಟಿ ಸಿಮ್ರನ್, ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ. ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ಶೈಲೇಂದ್ರ ಮತ್ತು ರಂಗು ಸಮರ್ಪಣ್ ಸೇರಿದಂತೆ ರಂಗಭೂಮಿಯ ಹಲವು ಕಲಾವಿದರು ಮುಖ್ಯ ಭೂಮಿಕೆಯಲ್ಲಿದ್ದಾರೆ. ನವಿರಾದ ಪ್ರೇಮಕಥೆಯ ಜೊತೆಗೆ ನಂಬಿಕೆ, ಸ್ನೇಹ ಮತ್ತು ಅಸ್ಮಿತೆಯ ವಿಷಯಗಳನ್ನು ಒಳಗೊಂಡಿರುವ ಈ ಚಿತ್ರವು, ಉತ್ತರ ಮತ್ತು ದಕ್ಷಿಣ ಭಾರತದ ಸಂಸ್ಕೃತಿಗಳ ಸಂಘರ್ಷ ಮತ್ತು ಸಮ್ಮಿಲನವನ್ನು ತೆರೆಮೇಲೆ ತರಲಿದೆ ಎಂದು ನಿರ್ದೇಶಕ ಬಿ. ಎಂ. ಗಿರಿರಾಜ ತಿಳಿಸಿದ್ದಾರೆ.
ಭಟ್ಕಳ ಹಾಗೂ ಬೆಂಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಿರುವ ಈ ಚಿತ್ರಕ್ಕೆ ಬಿ. ಜೆ. ಭರತ್ ಸಂಗೀತ, ಪ್ರಶಾಂತ ಲಾಗರ ಛಾಯಾಗ್ರಹಣ ಮತ್ತು ಅರ್ಜುನ್ ಕಿಟ್ಟು ಸಂಕಲನವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ‘ಕಲ್ಯಾಣಿ’ ಚಿತ್ರವನ್ನು ಬೆಳ್ಳಿ ತೆರೆಗೆ ತರಲು ಚಿತ್ರತಂಡ ಯೋಜನೆ ರೂಪಿಸಿದೆ.