ಬೆಂಗಳೂರು : ಭಾರತೀಯ ಚಿತ್ರರಂಗದಲ್ಲಿ ಸಾಲು ಸಾಲು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡುತ್ತಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ತನ್ನ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ವಿಜಯ್ ಕಿರಗಂದೂರು ನಿರ್ಮಿಸಲಿರುವ ಈ ಹೊಸ ಚಿತ್ರಕ್ಕಾಗಿ ತಮಿಳಿನ ಸ್ಟಾರ್ ನಟ ಸೂರ್ಯ ಹಾಗೂ ಖ್ಯಾತ ನಿರ್ದೇಶಕ ಟಿ. ಜೆ. ಜ್ಞಾನವೇಲ್ ಕೈಜೋಡಿಸಿದ್ದು, ಚಿತ್ರಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕಳೆದ ಎರಡು ದಶಕಗಳಿಂದ ವೈವಿಧ್ಯಮಯ ನಟನೆ ಮತ್ತು ಧೀಮಂತ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟ ಸೂರ್ಯ, ಎರಡು ರಾಷ್ಟ್ರ ಪ್ರಶಸ್ತಿಗಳು ಹಾಗೂ ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರೊಂದಿಗೆ ಕೈಜೋಡಿಸಿರುವ ನಿರ್ದೇಶಕ ಟಿ. ಜೆ. ಜ್ಞಾನವೇಲ್ ಅವರು ತಮ್ಮ ‘ಜೈ ಭೀಮ್’ ಚಿತ್ರದ ಮೂಲಕ ದೇಶಾದ್ಯಂತ ಅಪಾರ ಪ್ರಶಂಸೆ ಗಳಿಸಿದವರು. ಸಾಮಾಜಿಕ ಕಳಕಳಿ ಹಾಗೂ ಭಾವನಾತ್ಮಕ ಆಳವಿರುವ ಕಥೆಗಳನ್ನು ತೆರೆಗೆ ತರುವಲ್ಲಿ ಅವರು ಸೈ ಎನಿಸಿಕೊಂಡಿದ್ದಾರೆ.
‘ಕೆ.ಜಿ.ಎಫ್’, ‘ಕಾಂತಾರ’ ಮತ್ತು ‘ಸಲಾರ್’ ನಂತಹ ಬೃಹತ್ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, ಈಗ ಮತ್ತೊಂದು ವಿಭಿನ್ನ ಆಲೋಚನೆಯ ಕಥೆಗೆ ಬೆನ್ನೆಲುಬಾಗಿ ನಿಂತಿದೆ. ಈ ಮೈತ್ರಿಗೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರು, "ಚಿತ್ರರಂಗದ ಮೇಲಿನ ಅಪಾರ ಪ್ರೀತಿ ಹಾಗೂ ಒಂದೇ ರೀತಿಯ ಯೋಚನೆ ಉಳ್ಳವರು ಒಂದಾದಾಗ ಅತ್ಯುತ್ತಮ ಸಿನಿಮಾ ಮೂಡಿಬರಲು ಸಾಧ್ಯ. ಸೂರ್ಯ ಮತ್ತು ಟಿ. ಜೆ. ಜ್ಞಾನವೇಲ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ತಲುಪುವಂತಹ ಒಂದು ಪ್ರಾಮಾಣಿಕ ಹಾಗೂ ಅರ್ಥಪೂರ್ಣ ಕಥೆಯನ್ನು ಹೇಳುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ" ಎಂದು ತಿಳಿಸಿದ್ದಾರೆ. ಈ ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ನಟಿ ಕಾಯಾದು ಲೋಹರ್ ಕಾಣಿಸಿಕೊಳ್ಳುತ್ತಿದ್ದಾರೆ. ಸಾಯಿ ಅಭ್ಯಂಕರ್ ಅವರ ಸಂಗೀತ ನಿರ್ದೇಶನವಿದ್ದು, ಎಸ್. ಆರ್. ಕದಿರ್ ಅವರ ಛಾಯಾಗ್ರಹಣವಿದೆ. ಚಿತ್ರದ ಕಲಾ ನಿರ್ದೇಶನವನ್ನು ಕೆ. ಕದಿರ್ ನಿರ್ವಹಿಸುತ್ತಿದ್ದು, ಫಿಲೋಮಿನ್ ರಾಜ್ ಅವರ ಸಂಕಲನ ಕಾರ್ಯವಿರಲಿದೆ.
ಈ ಹೊಸ ಸಿನಿಮಾದ ಪಯಣವು ಜೂನ್ 29, 2026 ರಂದು ಚೆನ್ನೈನ ಪಾರ್ಕ್ ಹ್ಯಾಟ್‌ನಲ್ಲಿ ನಡೆದ ಭವ್ಯ ಮುಹೂರ್ತ ಸಮಾರಂಭದೊಂದಿಗೆ ಅಧಿಕೃತವಾಗಿ ಆರಂಭವಾಗಿದೆ. ಚಿತ್ರತಂಡ ಹಾಗೂ ಚಿತ್ರರಂಗದ ಪ್ರಮುಖ ಗಣ್ಯರು ಪಾಲ್ಗೊಂಡಿದ್ದ ಈ ಸಮಾರಂಭವು, ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಒಕ್ಕೂಟಕ್ಕೆ ಸಾಕ್ಷಿಯಾಯಿತು. ಪ್ರತಿಭಾವಂತ ತಂತ್ರಜ್ಞರು ಹಾಗೂ ಯಶಸ್ವಿ ನಿರ್ಮಾಣ ಸಂಸ್ಥೆ ಒಂದಾಗಿರುವುದರಿಂದ ಈ ಚಿತ್ರವು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.