ಬೆಂಗಳೂರು : ಕನ್ನಡ ಚಿತ್ರರಂಗದ ಚಲನಚಿತ್ರ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಬಾ ಮಾ ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ ಅವರು ಇಂದು ಮುಂಜಾವಿನ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಾ ಮಾ ಹರೀಶ್ ಅವರ ಕುಟುಂಬಕ್ಕೆ ಈ ಸಾವು ಭರಿಸಲಾಗದ ಆಘಾತವನ್ನು ತಂದಿದೆ. ಸ್ನೇಹಿತರೊಂದಿಗೆ ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಚಾರಣ ತಾಣವಾದ ಕೊಡಚಾದ್ರಿ ಬೆಟ್ಟಕ್ಕೆ ನಿನ್ನೆ ಪ್ರವಾಸ ತೆರಳಿದ್ದ ಉಲ್ಲಾಸ್ ಗೌಡ ಅವರು, ಇಂದು ಬೆಳಿಗ್ಗೆ ಬೆಟ್ಟ ಹತ್ತುವ ವೇಳೆ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಮೃತರ ನಿಧನಕ್ಕೆ ಸ್ಯಾಂಡಲ್‌ವುಡ್‌ನ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಕೇವಲ ಇಪ್ಪತ್ತೆಂಟರ ಹರೆಯದ ಉಲ್ಲಾಸ್ ಗೌಡ ಅವರಿಗೆ ಕೆಲ ತಿಂಗಳುಗಳ ಹಿಂದೆಯಷ್ಟೇ ಚಂದನಾ ಗೌಡ ಅವರೊಂದಿಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿತ್ತು. ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ವಿವಾಹ ಮಹೋತ್ಸವ ಜರುಗಬೇಕಿತ್ತು. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಉಲ್ಲಾಸ್ ಗೌಡ ಅವರು ತಂದೆಯ ನಿರ್ಮಾಣ ಸಂಸ್ಥೆ ಹಾಗೂ ವಿವಿಧ ವ್ಯವಹಾರಗಳ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸುತ್ತಿದ್ದರು. ಸಿನಿಮಾ ತರಬೇತಿ ಹಾಗೂ ರಂಗಭೂಮಿ ಆಸಕ್ತಿಯನ್ನು ಹೊಂದಿದ್ದ ಅವರು, ರಾಜಾಜಿನಗರದಲ್ಲಿ ಮಕ್ಕಳಿಗಾಗಿ 'ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್' (ಉಲ್ಲಾಸ್ ಸ್ಕೂಲ್ ಆಫ್ ಡ್ರಾಮಾ) ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು.