ಕಾಂತಾರಕ್ಕೂ ಮುಂಚೆ ಸಿನಿಮಾಗಳಲ್ಲಿ ದೈವರಾಧನೆ ಇತ್ತು-ರಿಷಬ್ ಶೆಟ್ಟಿ
ಕಾಂತಾರಕ್ಕೂ ಮುಂಚೆ ಸಿನಿಮಾಗಳಲ್ಲಿ ದೈವರಾಧನೆ ಇತ್ತು-ರಿಷಬ್ ಶೆಟ್ಟಿ
10/10/2024
10/10/2024
ಮಂಗಳೂರು: ಕಾಂತಾರ ಬರುವ ಮೊದಲೇ ಸುಮಾರು ಸಿನಿಮಾಗಳಲ್ಲಿ ದೈವರಾಧನೆ ಬಂದಿದೆ. ಚೋಮನ ದುಡಿಯಿಂದ ಹಿಡಿದು ಅನೇಕ ಪುಸ್ತಕಗಳಲ್ಲೂ ದೈವಾರಾಧನೆ ಬಂದಿದೆ. ನಾವು ಮೊದಲ ಬಾರಿಗೆ ಮಾಡಲಿಲ್ಲ. ಸಿನಿಮಾ ಬಂದಾಗ ತುಂಬಾ ಪಾಪ್ಯುಲರ್ ಆದಾಗ ಮೂಲ ಸಂಸ್ಕೃತಿ ಬಗ್ಗೆ ಗೊತ್ತಿಲ್ಲದವರು ಈ ರೀತಿ ಮಾಡುತ್ತಾರೆ. ಬೇರೆ ಬೇರೆ ಸ್ಟೇಜ್ ಗಳಲ್ಲಿ ಕಾರ್ಯಕ್ರಮದಲ್ಲಿ ಹಾಕುವಾಗ ನೋವಾಗುತ್ತದೆ ಎಂದರು. ನಾನು ಗುತ್ತಿನ ಮನೆಯವನಾಗಿ ದೈವವನ್ನು ನಂಬಿಕೆ ಇಟ್ಟುಕೊಂಡು ಪೂಜೆ ಮಾಡಿಕೊಂಡು ಬರುವವನು. ನಾವು ಸಿನಿಮಾ ಮಾಡಬೇಕಾದರೆ ದೈವ ಕಟ್ಟುವ ಸಮುದಾಯದವರ ಸಹಾಯ ಪಡೆದು ಮಾಡಿದ್ದೇವೆ. ಅಷ್ಟು ಶ್ರದ್ಧೆಯಿಂದ ಅದನ್ನು ಮಾಡಿಕೊಂಡು ಬಂದಿದ್ದೇವೆ. ನಮಗೆ ಕೇವಲ ಅದೊಂದು ಸಿನಿಮಾ ಅಲ್ಲ. ದೈವದ ಸೇವೆ ಅನ್ನೋ ರೀತಿ ಮಾಡಿಕೊಂಡು ಬಂದಿದ್ದೇವೆ.
ಹೊರಗಿನವರು ಇದನ್ನು ಅಪಹಾಸ್ಯ ಮಾಡಿದಾಗ ನಂಬಿದವರಿಗೆ ಬೇಸರವಾಗುವುದು ಸಹಜ. ಯಾರೂ ದೈವವನ್ನು ಸ್ಟೇಜ್ ಮೇಲೆ ಅನುಕರಣೆ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ ಎಂದು ರಿಷಬ್ ಶೆಟ್ಟಿ ಹೇಳಿದರು. ರಾಷ್ಟ್ರಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ಮೊದಲ ಬಾರಿಗೆ ಆಗಮಿಸಿದ ಅವರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ದೊರಕಿತು.
ಬಳಿಕ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂತಾರ ಮಂಗಳೂರಿನಲ್ಲಿ ಶುರುವಾದ ಸಿನಿಮಾ. ಪ್ರಶಸ್ತಿ ಪಡೆದು ಇಲ್ಲಿಗೆ ಬರುವಂತಾಗಿದ್ದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಈ ಪ್ರಶಸ್ತಿಯನ್ನು ದೈವಕ್ಕೆ, ದೈವ ನರ್ತಕರಿಗೆ ಹಾಗೂ ಅಪ್ಪು ಸರ್‌ಗೆ ಸಮರ್ಪಿಸುತ್ತೇನೆ. ಈ ಪ್ರಶಸ್ತಿಯನ್ನು ದೈವದ ಪಾದಕ್ಕೆ ಇಟ್ಟು ನನ್ನ ಕೆಲಸ ಮುಂದುವರೆಸುತ್ತೇನೆ ಎಂದು ಹೇಳಿದರು. ನ್ಯಾಷನಲ್ ಅವಾರ್ಡ್ ನಮ್ಮ ಇಡೀ ತಂಡಕ್ಕೆ ಸಲ್ಲಬೇಕು. ದೈವದ ಆಶೀರ್ವಾದವಿಲ್ಲವಾದರೆ ಸಿನಿಮಾ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಸಿನಿಮಾ ಮಾಡುವಾಗ ಅವಾರ್ಡ್ ಬರುತ್ತದೆಂದುಕೊಂಡಿರಲಿಲ್ಲ.
ಎಲ್ಲಾ ಜನರ ಪ್ರೀತಿಯಿಂದ ಸಾಧ್ಯವಾಗಿದೆ. ಕಾಂತಾರ ಶೂಟಿಂಗ್ ನಡೆಯುತ್ತಿದೆ ಆದಷ್ಟು ಬೇಗ ನಿರ್ಮಾಪಕರು ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರೆ. ಕಾಂತಾರ ಒನ್ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಈ ಹಿಂದೆ ಕಾಂತಾರಕ್ಕೆ ಎಷ್ಟು ಹೆಮ್ಮೆ ಪಟ್ಟಿದ್ದೀರೋ ಅದಕ್ಕಿಂತ ಹೆಚ್ಚು ಹೆಮ್ಮೆ ಪಡುತ್ತೀರ ಎಂದು ರಿಷಭ್ ಶೆಟ್ಟಿ ಹೇಳಿದರು.