image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟಾಕ್ಸಿಕ್ ರಿಲೀಸ್ ಡೇಟ್ ಫಿಕ್ಸ್: ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಫೈಟ್

ಟಾಕ್ಸಿಕ್ ರಿಲೀಸ್ ಡೇಟ್ ಫಿಕ್ಸ್: ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಫೈಟ್

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್ ದಾಸ್ ನಿರ್ದೇಶನದ ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್' ಕೊನೆಗೂ ತನ್ನ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿರುವಂತೆ ಆಗಸ್ಟ್ 26ರಂದು 'ಟಾಕ್ಸಿಕ್' ವಿಶ್ವಾದ್ಯಂತ ತೆರೆಕಾಣಲಿದೆ. ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಈ ಸಿನಿಮಾ, ಇದೀಗ ಮೂರನೇ ಬಾರಿ ಹೊಸ ದಿನಾಂಕವನ್ನು ಲಾಕ್ ಮಾಡಿಕೊಂಡಿದೆ. ಆದರೆ, ಈ ಬಿಡುಗಡೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದ ಇತರೆ ದೊಡ್ಡ ಸಿನಿಮಾಗಳ ತಂಡಗಳಲ್ಲಿ ತಲ್ಲಣ ಶುರುವಾಗಿದೆ. 'ಟಾಕ್ಸಿಕ್' ಅಬ್ಬರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ನೇರ ಪೈಪೋಟಿ ನೀಡಲಿರುವ ಅಥವಾ ಬಿಡುಗಡೆ ಮುಂದೂಡುವ ಭೀತಿಯಲ್ಲಿರುವ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ.

ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ನಟನೆಯ, ಶ್ರೀಕಾಂತ್ ಓದೆಲಾ ನಿರ್ದೇಶನದ 'ಪ್ಯಾರಡೈಸ್' ಸಿನಿಮಾ ಆಗಸ್ಟ್ 21ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಸಖತ್ ಮಾಸ್ ಎಲಿಮೆಂಟ್‌ಗಳನ್ನು ಹೊಂದಿರುವ ಈ ಚಿತ್ರವು 'ಟಾಕ್ಸಿಕ್' ರಿಲೀಸ್‌ಗೆ ಕೇವಲ ಐದು ದಿನ ಮುಂಚಿತವಾಗಿ ಬರಲಿದ್ದು, ಯಶ್ ಸಿನಿಮಾದ ಎಂಟ್ರಿಯಿಂದಾಗಿ 'ಪ್ಯಾರಡೈಸ್' ತನ್ನ ಬಿಡುಗಡೆಯನ್ನು ಮುಂದೂಡುವ ಸಾಧ್ಯತೆಗಳು ದಟ್ಟವಾಗಿವೆ. ಮತ್ತೊಂದೆಡೆ, ಆಗಸ್ಟ್ 23ರಂದು ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಬಹುನಿರೀಕ್ಷಿತ ಸೋಶಿಯೋ-ಫ್ಯಾಂಟಸಿ ಚಿತ್ರ 'ವಿಶ್ವಂಭರ' ತೆರೆಗೆ ಬರಲಿದೆ ಎಂಬ ಬಲವಾದ ವದಂತಿ ಇತ್ತು. ಆದರೆ ಈಗ 'ಟಾಕ್ಸಿಕ್' ಅಖಾಡಕ್ಕೆ ಇಳಿಯುತ್ತಿರುವುದರಿಂದ ಚಿರಂಜೀವಿ ಚಿತ್ರದ ಬಿಡುಗಡೆಯೂ ಮುಂದಕ್ಕೆ ಹೋಗಬಹುದು ಎನ್ನಲಾಗುತ್ತಿದೆ.

ಕೇವಲ ದಕ್ಷಿಣ ಭಾರತ ಮಾತ್ರವಲ್ಲದೆ, ಬಾಲಿವುಡ್ ಅಂಗಳದಲ್ಲೂ 'ಟಾಕ್ಸಿಕ್' ಬಿರುಗಾಳಿ ಎದ್ದಿದೆ. ಯಶ್ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಆಗಸ್ಟ್ 27ಕ್ಕೆ ವರುಣ್ ಧವನ್ ನಟನೆಯ 'ಬೇಡಿಯಾ 2' ಬಿಡುಗಡೆಯಾಗಬೇಕಿತ್ತು, ಆದರೆ ಈ ಚಿತ್ರ ಕೂಡ ತನ್ನ ದಿನಾಂಕವನ್ನು ಬದಲಾಯಿಸುವ ಯೋಚನೆಯಲ್ಲಿದೆ. ಇದರೊಂದಿಗೆ ಆಗಸ್ಟ್ 28ಕ್ಕೆ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ನಟನೆಯ 'ವಿವಾನ್: ದಿ ಫೋರ್ಸ್ ಆಫ್ ಫಾರೆಸ್ಟ್' ಹಾಗೂ ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ 'ಈಥಾ' ಸಿನಿಮಾಗಳು ಬಿಡುಗಡೆಗೆ ಕಾದಿವೆ.

ಈ ಹಿಂದೆ 'ಟಾಕ್ಸಿಕ್' ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಆ ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ (ಇರಾನ್-ಇಸ್ರೇಲ್) ಉಂಟಾಗಿದ್ದ ಯುದ್ಧದ ಪರಿಸ್ಥಿತಿಯು ಅಂತರರಾಷ್ಟ್ರೀಯ ವಿತರಣೆಯ ಮೇಲೆ ಪರಿಣಾಮ ಬೀರಿದ್ದರಿಂದ ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಲಾಗಿತ್ತು. ಬಳಿಕ ಸಿನಿಮಾಕಾನ್‌ನಲ್ಲಿ ಜಾಗತಿಕ ಮಾರುಕಟ್ಟೆಯಿಂದ ಸಿಕ್ಕ ಭರ್ಜರಿ ಪ್ರಶಂಸೆಯಿಂದಾಗಿ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ನಿರ್ಧಾರಸಿದ ಚಿತ್ರತಂಡ, ಇದೀಗ ಆಗಸ್ಟ್ 26ರ ವಾರಂಠದ ರಜಾ ದಿನಗಳ ಸರಣಿಯನ್ನು (ಓಣಂ, ಈದ್, ರಕ್ಷಾಬಂಧನ) ಗುರಿಯಾಗಿಸಿಕೊಂಡು ಕಣಕ್ಕಿಳಿಯುತ್ತಿದೆ.

Category
ಕರಾವಳಿ ತರಂಗಿಣಿ