ಚೆನ್ನೈ : ಭಾರತೀಯ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಮುಖ್ಯಭೂಮಿಕೆಯ ಬಹು ನಿರೀಕ್ಷಿತ ಚಿತ್ರ ವೆಟ್ಟೈಯನ್ ಇಂದು ಬಹಳ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ದೇಶಾದ್ಯಂತ ಹಲವೆಡೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಿನಿಪ್ರಿಯರು ಚಿತ್ರಮಂದಿರಗಳೆದುರು ಸಂಭ್ರಮಾಚರಣೆ ಮಾಡಿದ್ದಾರೆ. ಅಪ್ರತಿಮ ಕಲಾವಿದನ ಡ್ಯುಯಲ್ - ಶೇಡ್ ಪೊಲೀಸ್ ಪಾತ್ರಕ್ಕೆ ಬಹುತೇಕ ಮೆಚ್ಚುಗೆಯೇ ವ್ಯಕ್ತವಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾ ದೇಶಾದ್ಯಂತ ಸಖತ್ ಸದ್ದು ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಚೆನ್ನೈನಲ್ಲಿ ಸ್ಪೆಚಲ್ ಸ್ಕ್ರೀನಿಂಗ್ಸ್, ಮಾರ್ನಿಂಗ್ ಶೋಗಳು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶ ಕಂಡಿದೆ. ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಈಗಾಗಲೇ ಅಡ್ವಾನ್ಸ್ ಟಿಕೆಟ್ ವಿಷಯದಲ್ಲಿ 40 ಕೋಟಿ ರೂ.ಗೂ ಅಧಿಕ ಗಳಿಸಿದೆ ಎಂದು ವರದಿಯಾಗಿದೆ. ಈ ವ್ಯವಹಾರ ರಜನಿ ಸಿನಿಮಾ ಕ್ರೇಜ್ಗೆ ಹಿಡಿದ ಕೈಗನ್ನಡಿಯಾಗಿದೆ.
ಸೋಷಿಯಲ್ ಮೀಡಿಯಾದ ವಿವಿಧ ಪ್ಲ್ಯಾಟ್ಪಾರ್ಮ್ಗಳು ರಜನಿಕಾಂತ್ ಅಭಿನಯದ ಬಗೆಗಿನ ಮೆಚ್ಚುಗೆಯ ಮಾತುಗಳು, ಅದ್ಧೂರಿ ಸೆಲೆಬ್ರೆಶನ್ ವಿಡಿಯೋಗಳಿಂದ ತುಂಬಿವೆ. ಇದು ಸ್ಟಾರ್ಡಮ್ಗೆ ಸ್ಪಷ್ಟ ಉದಾಹರಣೆ. ಅಭಿಮಾನಿಗಳು ತಮ್ಮ ಅಭಿಮಾನ ವ್ಯಕ್ತಪಡಿಸುವ ರೀತಿ, ನಟನ ಮೇಲಿನ ಅವರ ಆರಾಧನೆ ವರ್ಣನಾತೀತ. ಅನೇಕರು ಇಂದಿನ ಈ ಅನುಭವವನ್ನು ಮಹಾ ಉತ್ಸವಕ್ಕೆ ಹೋಲಿಸಿದ್ದಾರೆ.