ಕರಾವಳಿಯ ಪ್ರತಿಭೆ, ಬಿಗ್ ಬಾಸ್ ಖ್ಯಾತಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅವರು ಇದೀಗ ಸ್ಯಾಂಡಲ್‌ವುಡ್‌ನ ಬೃಹತ್ ಪ್ರಾಜೆಕ್ಟ್‌ಗಳ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. 'ಜೈ' ಸಿನಿಮಾದ ಭರ್ಜರಿ ಯಶಸ್ಸು ಮತ್ತು ತಮಿಳಿನ 'ಸನ್ನಿಧಾನಂ ಪಿ.ಒ.' ಚಿತ್ರದ ಮೂಲಕ ನೆರೆಯ ರಾಜ್ಯದಲ್ಲೂ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ರೂಪೇಶ್ ಶೆಟ್ಟಿ, ಇದೀಗ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರ ಬಹುನಿರೀಕ್ಷಿತ ಚಿತ್ರ 'ಹಲ್ಕಾ ಡಾನ್'ನಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲು ಆಯ್ಕೆಯಾಗಿದ್ದಾರೆ.
'ಟಗರು', 'ಸಲಗ'ದಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರ 'ವೀನಸ್ ಎಂಟರ್ಟೈನರ್ಸ್' ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಲ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಆಕ್ಷನ್-ಕಾಮಿಡಿ ಮನರಂಜನಾ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದ್ದು, ಈಗಾಗಲೇ ಚಿತ್ರೀಕರಣದ ಅಖಾಡಕ್ಕೆ ರೂಪೇಶ್ ಶೆಟ್ಟಿ ಧುಮುಕಿದ್ದಾರೆ. ಚಿತ್ರದಲ್ಲಿ ಪ್ರಮೋದ್ ಮತ್ತು ಅಮೃತಾ ಅಯ್ಯಂಗಾರ್ ಮುಖ್ಯ ಭೂಮಿಕೆಯಲ್ಲಿದ್ದು, ರೂಪೇಶ್ ಶೆಟ್ಟಿಯವರ ಸೇರ್ಪಡೆಯಿಂದಾಗಿ ಚಿತ್ರದ ತಾರಾಬಳಗ ಮತ್ತಷ್ಟು ಬಲಗೊಂಡಿದೆ. ತಾಂತ್ರಿಕ ವಿಭಾಗದಲ್ಲಿ ವಿ. ಹರಿಕೃಷ್ಣ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಲಿದೆ.