ಬೆಂಗಳೂರು : ರಂಗವೈಭೋಗ ಕರ್ನಾಟಕದ ಪ್ರಸಿದ್ಧ ದೇಗುಲ ನೃತ್ಯ ಪ್ರಕಾರಗಳನ್ನು ಒಳಗೊಂಡ ಸಾಕ್ಷ್ಯಚಿತ್ರವಾಗಿದ್ದು, ಈ ಚಿತ್ರವನ್ನು 2022ರಲ್ಲಿ ತಯಾರಿಸಲಾಗಿತ್ತು.
ಕರ್ನಾಟಕದ ಸಂಸ್ಕೃತಿಯನ್ನು ಸಾರಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ 'ರಂಗವೈಭೋಗ'ಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ದೆಹಲಿಯಲ್ಲಿಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಟರಾದ ಸಾಗರ್ ಪುರಾಣಿಕ್ ಮತ್ತು ಸುನೀಲ್ ಪುರಾಣಿಕ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ರಂಗವೈಭೋಗ ಸಿನಿಮಾದ ಕುರಿತು ಮಾತನಾಡಿದ ಸುನಿಲ್ ಪುರಾಣಿಕ್ "ನಾನು ಕಳೆದ 37 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿದ್ದೇನೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಅತ್ಯುತ್ತಮ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೇನೆ. ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಶುರು ಮಾಡಿದೆ. ನಂತರ ನಟನೆ, ಮುಂದೆ ನಿರ್ದೇಶನ ಹೀಗೆ ಸುಮಾರು 20ಕ್ಕೂ ಹೆಚ್ಚ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ನಾನೊಬ್ಬ ರಾಷ್ಟ್ರೀಯವಾದಿಯಾಗಿದ್ದು, ದೇಶದ ಸಂಸ್ಕೃತಿ ಬಗ್ಗೆ ಸಿನಿಮಾ ಮಾಡುವ ಒಲವು ಹೊಂದಿದ್ದೇನೆ. ನನ್ನ ವಿವಿಧ ಯೋಜನೆಗಳಲ್ಲಿ ಕಲೆ ಮತ್ತು ಸಂಸ್ಕೃತಿಗೆ ಏನನ್ನಾದರೂ ಕೊಡುಗೆ ನೀಡುವ ಹಂಬಲದಲ್ಲಿರುತ್ತದೆ. ಈ ನಿಟ್ಟಿನಲ್ಲಿ ಒಮ್ಮೆ ದೇವಸ್ಥಾನಕ್ಕೆ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದಾಗ ಮೊದಲ ಬಾರಿಗೆ ದೇಗುಲ ನೃತ್ಯವನ್ನು ಕಂಡೆ. ನಂತರ ಈ ಬಗ್ಗೆ ನನ್ನಲ್ಲಿ ವಿಶೇಷ ಆಸಕ್ತಿ ಮೂಡಿ ಸಿನಿಮಾ ಮಾಡಬೇಕೆಂದು ನಿರ್ಧರಿಸಿದೆ. ಇದರ ಬಗ್ಗೆ ಇನ್ನಷ್ಟು ತಿಳಿಯಲು ನೃತ್ಯ ಇತಿಹಾಸಕಾರರಾದ ಕರುಣಾ ವಿಜಯೇಂದ್ರ ಅವರೊಂದಿಗೆ ಕೆಲಸ ಮಾಡಿದೆ. ಇದು ವೈಭೋಗ ಸಾಕ್ಷ್ಯಚಿತ್ರ ಮಾಡಲು ಸಹಕಾರಿಯಾಯಿತು" ಎಂದು ಅವರು ಹೇಳಿದರು.