image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿ ಸೊಗಡಿನ ಕ್ಷೇತ್ರಪಾಲ ಚಿತ್ರದ ಶೀರ್ಷಿಕೆ ಮತ್ತು ಮೋಶನ್ ಪೋಸ್ಟರ್ ಅನಾವರಣ

ಕರಾವಳಿ ಸೊಗಡಿನ ಕ್ಷೇತ್ರಪಾಲ ಚಿತ್ರದ ಶೀರ್ಷಿಕೆ ಮತ್ತು ಮೋಶನ್ ಪೋಸ್ಟರ್ ಅನಾವರಣ

ಕರಾವಳಿಯ ಸಂಸ್ಕೃತಿ, ಆಚಾರ-ವಿಚಾರ ಮತ್ತು ದೈವಾರಾಧನೆಯ ಹಿನ್ನೆಲೆಯನ್ನು ಒಳಗೊಂಡ 'ಕ್ಷೇತ್ರಪಾಲ' ಎಂಬ ಹೊಸ ಚಿತ್ರದ ಶೀರ್ಷಿಕೆ ಮತ್ತು ಮೋಶನ್ ಪೋಸ್ಟರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ.  ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್, ಕನ್ನಡಪರ ಹೋರಾಟಗಾರ ನಿಂಗೇಗೌಡ ಮತ್ತು ನಟ ರಾಘು ರಾಮನಕೊಪ್ಪ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಚಿತ್ರದ ಶೀರ್ಷಿಕೆ ಮತ್ತು ಮೋಶನ್ ಪೋಸ್ಟರ್ ಅನಾವರಣಗೊಂಡಿತು.

ಧಾರ್ಮಿಕ ನಂಬಿಕೆಯೊಂದಿಗೆ ನ್ಯಾಯ, ನೀತಿ ಮತ್ತು ಧರ್ಮವನ್ನು ಪಾಲಿಸುವ ವ್ಯಕ್ತಿಯೊಬ್ಬನ ಹೋರಾಟವೇ ಈ ಚಿತ್ರದ ಮುಖ್ಯ ಕಥಾಹಂದರವಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ದೀರ್ಘಕಾಲ ಕೆಲಸ ನಿರ್ವಹಿಸಿದ ಅನುಭವವಿರುವ ಜಗದೀಶ್ ಮಂಜಣ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸಸ್ಪೆನ್ಸ್, ಆ್ಯಕ್ಷನ್ ಮತ್ತು ಥ್ರಿಲ್ಲರ್ ಅಂಶಗಳನ್ನು ಸಮಾನವಾಗಿ ಬೆರೆಸಿ ಕಥೆಯನ್ನು ಹೆಣೆಯಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
'ಮುತ್ತಮ್ಮ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೂಲಕ ರಾಘವ ಪೂಜಾರಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇವರೊಂದಿಗೆ ಬಲರಾಜ್ ವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಸುಚೇಂದ್ರ ಪ್ರಸಾದ್, ಅದ್ವಿಕಾ ಶೆಟ್ಟಿ, ರಾಘು ರಾಮನಕೊಪ್ಪ, ಗೌತಮಿ ಗೌಡ ಮತ್ತು ನಮಿತಾ ಕಿರಣ್ ಮೊದಲಾದವರು ತಾರಾಗಣದಲ್ಲಿದ್ದಾರೆ.

ಉಡುಪಿ ಮತ್ತು ಕುಂದಾಪುರದ ಸುತ್ತಮುತ್ತ ಬಹುತೇಕ ಚಿತ್ರೀಕರಣ ನಡೆಯಲಿದ್ದು, ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿದೆ. ಇದೇ ಜುಲೈ ಅಂತ್ಯದಿಂದ 40 ದಿನಗಳ ಕಾಲ ಎರಡನೇ ಹಂತದ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ. ಕೆ. ನವೀನ್ ಸುವರ್ಣ ಛಾಯಾಗ್ರಹಣ, ಗಿರೀಶ್ ಕುಮಾರ್ ಸಂಕಲನ ಮತ್ತು ಯತೀಶ್ ರಾಜ್ ಸಂಗೀತ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

Category
ಕರಾವಳಿ ತರಂಗಿಣಿ