image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹರ್ಷಿಣಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಕಿರುನಗೆ' ಚಿತ್ರದ ಶೀರ್ಷಿಕೆ ಅನಾವರಣ

ಹರ್ಷಿಣಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಕಿರುನಗೆ' ಚಿತ್ರದ ಶೀರ್ಷಿಕೆ ಅನಾವರಣ

ಬೆಂಗಳೂರು:ಹರ್ಷಿಣಿ ಸಿನಿಮಾಸ್ ಲಾಂಛನದಲ್ಲಿ ಲತಾಶ್ರೀ ಡಿ.ಸಿ ಅವರು ನಿರ್ಮಿಸಿರುವ ಹಾಗೂ ಅಶೋಕ್ ಕಡಬ ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ "ಕಿರುನಗೆ" ಎಂದು ಅದ್ದೂರಿಯಾಗಿ ಅನಾವರಣಗೊಂಡಿದೆ. ಡಾ||ರಾಜಕುಮಾರ್ ಅವರ ಪುತ್ರಿ ಲಕ್ಷ್ಮಿ ಗೋವಿಂದರಾಜು ಹಾಗೂ ಅಳಿಯ ಎಸ್.ಎ. ಗೋವಿಂದರಾಜು ಅವರು ಈ ಸಮಾರಂಭದಲ್ಲಿ ಭಾಗವಹಿಸಿ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್, ನಟ ಷಣ್ಮುಖ ಮತ್ತು ಯುವ ಕಾಂಗ್ರೆಸ್ ಮುಖಂಡ ಅಶೋಕ್ ಭೀಮಾನಾಯಕ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರದ ಯಶಸ್ಸಿಗೆ ಶುಭ ಕೋರಿದರು.

ನಿರ್ದೇಶಕ ಅಶೋಕ್ ಕಡಬ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆರನೇ ಚಿತ್ರ ಇದಾಗಿದ್ದು, ಪೋಷಕರಿಗಾಗಿ ಮಕ್ಕಳು ಪ್ರೀತಿಯನ್ನು ತ್ಯಾಗ ಮಾಡುವ ಕಥಾಹಂದರವನ್ನು ಈ ಪ್ರೇಮಕಥೆ ಹೊಂದಿದೆ. ಬೆಂಗಳೂರು, ಉಡುಪಿ, ವಿಜಾಪುರ, ಮುಂಬೈ ಮತ್ತು ಗೋವಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿವೆ. ಹೊಸ ಪ್ರತಿಭೆಗಳಾದ ವಿಜಯ್ ರಾಜ್ ಮತ್ತು ಖುಷ್ಬು ನಾಯಕ-ನಾಯಕಿಯರಾಗಿ ನಟಿಸಿದ್ದು, ಹಿರಿಯ ನಟಿ ಶೃತಿ, ರಾಜು ಖೇರ್, ಸಂಗೀತ, ಮೂಗು ಸುರೇಶ್, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ ಮತ್ತು ಶ್ರೀಶ ತಾರಾಬಳಗದಲ್ಲಿದ್ದಾರೆ.

ಲತಾಶ್ರೀ ಡಿ.ಸಿ ಅವರೇ ಕಥೆಯನ್ನು ಬರೆದಿದ್ದು, ಸುಕೃತ್ ಸಂಗೀತ ನಿರ್ದೇಶನ, ಸಿದ್ದು ಕಂಚನಹಳ್ಳಿ ಛಾಯಾಗ್ರಹಣ ಹಾಗೂ ನಾಗಾರ್ಜುನ ಶರ್ಮ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶೀರ್ವಾದ ಹಾಗೂ ತಮ್ಮ ತಂದೆ ಮಾಜಿ ಶಾಸಕ ದೇವಾನಂದ್ ಚವ್ಹಾಣ್ ಅವರ ಪ್ರೇರಣೆಯಿಂದ ಈ ಚಿತ್ರವನ್ನು ನಿರ್ಮಿಸಿರುವುದಾಗಿ ಲತಾಶ್ರೀ ಡಿ.ಸಿ ತಿಳಿಸಿದ್ದಾರೆ. ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

Category
ಕರಾವಳಿ ತರಂಗಿಣಿ