ಮಂಗಳೂರು: ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಕೀರ್ತನ್ ಭಂಡಾರಿ ನಿರ್ದೇಶನದ ಬಹುನಿರೀಕ್ಷಿತ ತುಳು ಚಲನಚಿತ್ರ ‘ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)’ ಮೇ 22ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲು ಸಜ್ಜಾಗಿದೆ.
ತುಳು ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಬಜೆಟ್‌ನ ಸಿನಿಮಾವೆಂದು ಗುರುತಿಸಿಕೊಂಡಿರುವ ಈ ಚಿತ್ರವು ಕ್ರಿಕೆಟ್ ಮತ್ತು ಕ್ರೀಡಾಪಟುಗಳ ಜೀವನದ ರೋಚಕ ಕಥಾಹಂದರವನ್ನು ಹೊಂದಿದೆ.
ಚಿತ್ರದಲ್ಲಿ ಹಾಸ್ಯ, ಪ್ರೇಮ ಹಾಗೂ ಸಮಾಜಮುಖಿ ಸಂದೇಶಗಳಿದ್ದು, ಕೀರ್ತನ್ ಭಂಡಾರಿ ಅವರು ಕಥೆ ಹಾಗೂ ಚಿತ್ರಕಥೆ ಬರೆದು ಚೊಚ್ಚಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ನಿರ್ಮಾಪಕ ಪ್ರಜ್ವಲ್ ಶೆಟ್ಟಿ ಅವರೇ ಇಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ಚಿತ್ರದಲ್ಲಿ ತುಳು ಚಿತ್ರರಂಗದ ದಿಗ್ಗಜರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಸೇರಿದಂತೆ ವಿನೀತ್ ಕುಮಾರ್, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ಉಮೇಶ್ ಮಿಜಾರು ಮುಂತಾದ ದೊಡ್ಡ ತಾರಾಗಣವೇ ಇದೆ.
ತಾಂತ್ರಿಕವಾಗಿ ಸಿನಿಮಾ ಅತ್ಯಂತ ಶ್ರೀಮಂತವಾಗಿದ್ದು, ವಿನುತ್ ಕೆ. ಸುವರ್ಣ ಅವರ ಛಾಯಾಗ್ರಹಣ ಹಾಗೂ ಸುಜಯ್ ಶಿವರಾಮ್ ಮತ್ತು ಕೌಶಿಕ್ ಭಂಡಾರಿ ಅವರ ಸಂಕಲನ ಗಮನಾರ್ಹವಾಗಿದೆ. ಸೃಜನ್ ಕುಮಾರ್ ತೋನ್ಸೆ ಅವರ ಸಂಗೀತವಿದ್ದು, ಕೀರ್ತನ್ ಭಂಡಾರಿ, ಸೃಜನ್ ಮಾನವ್ ಹಾಗೂ ಶ್ರೀನಿಧಿ ಶೆಟ್ಟಿ ಸಾಹಿತ್ಯ ರಚಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮತ್ತು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ.
ವಿಶೇಷವೆಂದರೆ, ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿತು. ಪ್ರಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಲ್ಲದೆ, ಸಿನಿಮಾದಲ್ಲಿ ಒಂದು ಹೃದಯಸ್ಪರ್ಶಿ ಗೀತೆಯನ್ನು ಹಾಡಿದ್ದಾರೆ. ಕಾರ್ಯಕ್ರಮದಲ್ಲಿ ಬಿ.ಆರ್. ಶೆಟ್ಟಿ, ಸರ್ವೋತ್ತಮ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈಗಾಗಲೇ ಯುಎಇ, ಸೌದಿ ಅರೇಬಿಯಾ ಸೇರಿದಂತೆ ಹಲವು ವಿದೇಶಗಳಲ್ಲಿ ಪ್ರೀಮಿಯರ್ ಶೋಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದು, ಪ್ರೇಕ್ಷಕರಿಂದ ಮುಕ್ತ ಕಂಠದ ಪ್ರಶಂಸೆ ವ್ಯಕ್ತವಾಗಿದೆ ಎಂದು ನಟ-ನಿರ್ಮಾಪಕ ಪ್ರಜ್ವಲ್ ಶೆಟ್ಟಿ ತಿಳಿಸಿದ್ದಾರೆ.