ಬೆಂಗಳೂರು: ಉದ್ಯಮಿಯಾಗಿದ್ದರೂ ಸಿನಿಮಾ ನಿರ್ದೇಶನದ ಕನಸು ಹೊತ್ತಿದ್ದ ಜಗದೀಶ್ ಅವರು ತಮ್ಮ ಚೊಚ್ಚಲ ಪ್ರಯತ್ನವಾಗಿ "ಧೃತಿ" ಚಿತ್ರವನ್ನು ಸಮಾಜಕ್ಕೆ ಅರ್ಪಿಸಲು ಸಜ್ಜಾಗಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವು ಮೇ 8 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಹಾಗೂ ನಿರ್ಮಾಪಕ ಜಗದೀಶ್, "ಚಿಕ್ಕಂದಿನಿಂದಲೂ ಚಿತ್ರರಂಗದ ಬಗ್ಗೆ ಆಸೆಯಿತ್ತು. ಆರು ವರ್ಷಗಳ ಪರಿಶ್ರಮದ ಫಲವಾಗಿ ಈ ಚಿತ್ರ ಮೂಡಿಬಂದಿದೆ. ಆರಂಭದಲ್ಲಿ ಆರ್ಥಿಕ ಮುಗ್ಗಟ್ಟಿನಿಂದಾಗಿ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುವ ಯೋಜನೆ ಇತ್ತು, ಆದರೆ ಪತ್ನಿ ಮತ್ತು ಗೆಳೆಯರ ಸಹಕಾರದಿಂದ ದೊಡ್ಡ ಮಟ್ಟದಲ್ಲೇ ಚಿತ್ರ ನಿರ್ಮಾಣವಾಯಿತು. ಚಿತ್ರೀಕರಣದ ವೇಳೆ ಛಾಯಾಗ್ರಾಹಕರನ್ನು ಕಳೆದುಕೊಂಡರೂ, ನಾನೇ ಆ ಜವಾಬ್ದಾರಿಯನ್ನು ಹೊತ್ತು ಚಿತ್ರ ಪೂರ್ಣಗೊಳಿಸಿದೆ. ಈ ಚಿತ್ರದಲ್ಲಿ ಮಹಿಳೆಯರ ಮೇಲಿನ ಶೋಷಣೆ ಮತ್ತು ಅದಕ್ಕಿರುವ ಪರಿಹಾರದ ಬಗ್ಗೆ ಕಥೆ ಹೆಣೆಯಲಾಗಿದೆ," ಎಂದು ತಿಳಿಸಿದರು.
ಚಿತ್ರದ ನಾಯಕಿ ಆಂಚಲ್ ಮಾತನಾಡಿ, "ಧೃತಿ" ಎಂಬುದು ನನ್ನ ಪಾತ್ರದ ಹೆಸರು. ಎಂತಹ ಕಠಿಣ ಸಮಸ್ಯೆಗಳು ಎದುರಾದರೂ ಧೃತಿಗೆಡದೆ ಧೈರ್ಯದಿಂದ ಎದುರಿಸುವ ಮಹಿಳೆಯ ಪಾತ್ರವಿದು. ಮೊದಲ ಚಿತ್ರದಲ್ಲೇ ಇಂತಹ ಸದಭಿರುಚಿಯ ಪಾತ್ರ ಸಿಕ್ಕಿರುವುದು ನನ್ನ ಪುಣ್ಯ," ಎಂದರು. ರಂಗಭೂಮಿ ಹಾಗೂ ನೃತ್ಯ ಹಿನ್ನೆಲೆಯುಳ್ಳ ನಾಯಕ ನಟ ಪ್ರಶಾಂತ್ ಅವರು ತಮ್ಮ ಕನಸಿನ ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದಾಗಿ ಸಂತಸ ವ್ಯಕ್ತಪಡಿಸಿದರು.
ಸಂಗೀತ ನಿರ್ದೇಶಕ ಪ್ರಸನ್ನ ಕುಮಾರ್ ಚಿತ್ರದ ಹಾಡುಗಳ ಬಗ್ಗೆ ಮಾಹಿತಿ ನೀಡಿದರೆ, ನಟರಾದ ಮನೋಜ್ ಕುಮಾರ್ ಮತ್ತು ಮಧು ಮಂದಗೆರೆ ತಮ್ಮ ಅಭಿನಯದ ಕುರಿತು ಹಂಚಿಕೊಂಡರು. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯವನ್ನೂ ಜಗದೀಶ್ ಅವರೇ ಒದಗಿಸಿದ್ದಾರೆ. ಹೊಸ ಪ್ರತಿಭೆಗಳ ಈ ಪ್ರಯತ್ನವನ್ನು ಚಿತ್ರಮಂದಿರಗಳಲ್ಲೇ ನೋಡಿ ಹರಸುವಂತೆ ಚಿತ್ರತಂಡ ಮನವಿ ಮಾಡಿದೆ.