image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸುಪ್ರೀಂಕೋರ್ಟ್ ವ್ಯಾಜ್ಯಗಳ ಇತ್ಯರ್ಥಕ್ಕೆ 'ಸಮಾಧಾನ ಸಮಾರೋಹ-2026': ರಾಜ್ಯದ 4,328 ಪ್ರಕರಣಗಳ ವಿಲೇವಾರಿಗೆ ವಿಶೇಷ ಲೋಕ ಅದಾಲತ್ ಸನ್ನದ್ಧ

ಸುಪ್ರೀಂಕೋರ್ಟ್ ವ್ಯಾಜ್ಯಗಳ ಇತ್ಯರ್ಥಕ್ಕೆ 'ಸಮಾಧಾನ ಸಮಾರೋಹ-2026': ರಾಜ್ಯದ 4,328 ಪ್ರಕರಣಗಳ ವಿಲೇವಾರಿಗೆ ವಿಶೇಷ ಲೋಕ ಅದಾಲತ್ ಸನ್ನದ್ಧ

ಬೆಂಗಳೂರು : ​ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಸಾವಿರಾರು ಪ್ರಕರಣಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಒಂದು ಸುವರ್ಣಾವಕಾಶ ಒದಗಿ ಬಂದಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಇದೇ ಆಗಸ್ಟ್ 21ರಿಂದ ಮೂರು ದಿನಗಳ ಕಾಲ 'ಸಮಾಧಾನ ಸಮಾರೋಹ-2026' ಎಂಬ ವಿಶೇಷ ಲೋಕ ಅದಾಲತ್ ಅನ್ನು ಆಯೋಜಿಸಿದೆ. ಈ ಮಹತ್ವದ ಬೆಳವಣಿಗೆಯ ಕುರಿತು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಅನು ಸಿವರಾಮನ್ ಮತ್ತು ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಆರ್. ದೇವದಾಸ್ ಅವರು ಗುರುವಾರ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಮಗ್ರ ಮಾಹಿತಿ ನೀಡಿದರು. ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ದಶಕಗಳಿಂದ ಬಾಕಿ ಉಳಿದಿರುವ ವ್ಯಾಜ್ಯಗಳನ್ನು ಜನಸಾಮಾನ್ಯರು ತಮ್ಮ ಹತ್ತಿರದ ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿಯೇ ಕುಳಿತು ಸಂಧಾನದ ಮೂಲಕ ಅಂತ್ಯಗೊಳಿಸಲು ಈ ಕಾರ್ಯಕ್ರಮ ನಾಂದಿ ಹಾಡಲಿದೆ.

​ಈ ವಿಶೇಷ ಲೋಕ ಅದಾಲತ್‌ನಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಒಟ್ಟು 4,328 ಪ್ರಕರಣಗಳನ್ನು ಮೊದಲ ಹಂತದಲ್ಲಿ ಗುರುತಿಸಲಾಗಿದ್ದು, ಇವುಗಳನ್ನು ಸೌಹಾರ್ದ ಸಂಧಾನದ ಮೂಲಕ ಮುಕ್ತಾಯಗೊಳಿಸಲು ಪ್ರಾಧಿಕಾರ ಸಜ್ಜಾಗಿದೆ. ವಿಶೇಷವೆಂದರೆ, ಸುಪ್ರೀಂಕೋರ್ಟ್ ಮಟ್ಟದ ಈ ಪ್ರಕರಣಗಳಿಗಾಗಿ ಸಾರ್ವಜನಿಕರು ದೆಹಲಿಗೆ ಅಲೆಯುವ ಅಗತ್ಯವಿಲ್ಲ; ಬದಲಾಗಿ ತಮ್ಮ ತಾಲೂಕು, ಜಿಲ್ಲಾ ಅಥವಾ ರಾಜ್ಯ ಮಟ್ಟದ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿ ತಮ್ಮ ವ್ಯಾಜ್ಯಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಾಯಿತ ಕಾನೂನು ಸಮನ್ವಯಕಾರರು ಮತ್ತು ಮಧ್ಯಸ್ಥಿಕೆದಾರರ ಸಹಾಯದೊಂದಿಗೆ ಸ್ಥಳೀಯವಾಗಿಯೇ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕಿಂಗ್ ಮತ್ತು ವಿಮೆ ಸಂಬಂಧಿತ ವಿವಾದಗಳು, ಮೋಟಾರು ಅಪಘಾತ ಪರಿಹಾರ (MACT) ಪ್ರಕರಣಗಳು, ನಾಗರಿಕ ಹಕ್ಕುಗಳ ವ್ಯಾಜ್ಯಗಳು, ಗ್ರಾಹಕ ವೇದಿಕೆಯ ಪ್ರಕರಣಗಳು, ರೇರಾ (RERA) ಸಂಬಂಧಿತ ದೂರುಗಳು, ಕೌಟುಂಬಿಕ ಕಲಹಗಳು, ಕಾರ್ಮಿಕ ಮತ್ತು ಕೈಗಾರಿಕಾ ವಿವಾದಗಳು ಸೇರಿದಂತೆ ಭೂಸ್ವಾಧೀನ, ಬಾಡಿಗೆ ನಿಯಂತ್ರಣ ಮತ್ತು ಸೇವಾ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಕ್ಕೆ ಆದ್ಯತೆಯ ಮೇಲೆ ಪರಿಗಣಿಸಲಾಗುತ್ತಿದೆ.

​ಜಿಲ್ಲಾವಾರು ಪ್ರಕರಣಗಳ ಪಟ್ಟಿಯನ್ನು ಗಮನಿಸಿದರೆ, ರಾಜಧಾನಿ ಬೆಂಗಳೂರು ನಗರ ಜಿಲ್ಲೆಯು ಅತಿ ಹೆಚ್ಚು ಅಂದರೆ 1,245 ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಉಳಿದಂತೆ ಬೆಳಗಾವಿ ಜಿಲ್ಲೆಯಲ್ಲಿ 517, ಕಲಬುರಗಿ 269, ವಿಜಯಪುರ 213, ಧಾರವಾಡ 188, ಬಾಗಲಕೋಟೆ 159, ಗದಗ 125, ಬಳ್ಳಾರಿ 109 ಮತ್ತು ತುಮಕೂರು ಜಿಲ್ಲೆಯಲ್ಲಿ 101 ಪ್ರಕರಣಗಳನ್ನು ಗುರುತಿಸಲಾಗಿದೆ. ಇತರ ಜಿಲ್ಲೆಗಳಾದ ಕೊಪ್ಪಳ (98), ಹಾವೇರಿ (81), ಉಡುಪಿ (78), ಬೀದರ್ (77), ದಕ್ಷಿಣ ಕನ್ನಡ (75), ಶಿವಮೊಗ್ಗ (69), ರಾಯಚೂರು (69), ಚಿತ್ರದುರ್ಗ (58), ಮೈಸೂರು (56), ದಾವಣಗೆರೆ (47), ಉತ್ತರ ಕನ್ನಡ (35), ಮಂಡ್ಯ (30), ಚಿಕ್ಕಮಗಳೂರು (27), ಹಾಸನ (24), ಬೆಂಗಳೂರು ಗ್ರಾಮಾಂತರ (18), ರಾಮನಗರ (17), ಚಿಕ್ಕಬಳ್ಳಾಪುರ (17), ಕೊಡಗು (15), ಯಾದಗಿರಿ (14) ಹಾಗೂ ಚಾಮರಾಜನಗರ ಜಿಲ್ಲೆಯ 4 ಪ್ರಕರಣಗಳು ಈ ಪಟ್ಟಿಯಲ್ಲಿ ಸೇರಿವೆ. ನ್ಯಾಯಾಂಗದ ಮೇಲಿನ ಹೊರೆ ತಗ್ಗಿಸಲು ಮತ್ತು ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಹಮ್ಮಿಕೊಳ್ಳಲಾಗಿರುವ ಈ 'ಸಮಾಧಾನ ಸಮಾರೋಹ'ವು ವ್ಯಾಜ್ಯನಿರತ ಸಾರ್ವಜನಿಕರಿಗೆ ಕಡಿಮೆ ಖರ್ಚಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಇರುವ ಅತ್ಯುತ್ತಮ ವೇದಿಕೆಯಾಗಲಿದೆ ಎಂದು ನ್ಯಾಯಮೂರ್ತಿಗಳು ಆಶಯ ವ್ಯಕ್ತಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ