ಮನರಂಜನಾ ಜಗತ್ತು ಹೊರಗಿನಿಂದ ನೋಡುವವರಿಗೆ ಎಷ್ಟು ಬಣ್ಣಬಣ್ಣವಾಗಿ ಮತ್ತು ಆಕರ್ಷಕವಾಗಿ ಕಾಣಿಸುತ್ತದೆಯೋ, ಅದರ ಬೆನ್ನಹಿಂದಿನ ವಾಸ್ತವ ಬದುಕು ಅಷ್ಟೇ ಕಠಿಣ ಮತ್ತು ಅಪಾಯಕಾರಿ ಸವಾಲುಗಳಿಂದ ಕೂಡಿರುತ್ತದೆ. ಇಂದು ವಿಶ್ವ ಕಾರ್ಮಿಕರ ದಿನ.
ಕಾರ್ಮಿಕ ಎಂದರೆ ಕೇವಲ ಕಾರ್ಖಾನೆಗಳಲ್ಲಿ ಅಥವಾ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವವರು ಮಾತ್ರವಲ್ಲ, ಸರ್ಕಸ್‌ನ ಎತ್ತರದ ಹಗ್ಗದ ಮೇಲೆ ನಡೆಯುವವರು, ಬೆಂಕಿಯೊಂದಿಗೆ ಸರಸವಾಡುವವರು, ಮರಣ ಬಾವಿಯ ಅಬ್ಬರದ ವೇಗದಲ್ಲಿ ಬೈಕ್ ಸವಾರಿ ಮಾಡುವವರು, ಹಗಲುವೇಷದಂತಹ ಜಾನಪದ ಕಲೆಗಳ ಮೂಲಕ ಜನರನ್ನು ರಂಜಿಸುವವರು ಅಥವಾ ಬೆಳ್ಳಿತೆರೆಯ ಮೇಲೆ ನಾಯಕನಿಗಾಗಿ ಪ್ರಾಣ ಪಣಕ್ಕಿಟ್ಟು ಸಾಹಸ ಮಾಡುವ ಸಿನಿಮಾ ಸ್ಟಂಟ್ ಕಲಾವಿದರು ಕೂಡ ಶ್ರಮಜೀವಿಗಳೇ. ದುರಂತವೆಂದರೆ, ಇವರ ಅದ್ಭುತ ಸಾಹಸಕ್ಕೆ ಪ್ರೇಕ್ಷಕರಿಂದ ಸಿಗುವ ಚಪ್ಪಾಳೆಗಳು ಮತ್ತು ಸೀಟಿಗಳು ಅವರ ಬದುಕಿನ ಮೂಲಭೂತ ಸಂಕಷ್ಟಗಳಿಗೆ ಕನಿಷ್ಠ ಭದ್ರತೆಯನ್ನೂ ಒದಗಿಸುತ್ತಿಲ್ಲ.
ಸಾಹಸಮಯ ಕಲಾವಿದರ ವಿಡಿಯೋಗಾಗಿ ಕ್ಲಿಕ್ ಮಾಡಿ
ಈ ಸಾಹಸ ಕಲಾವಿದರ ಬದುಕು ಪ್ರತಿಕ್ಷಣವೂ ಸಾವಿನೊಂದಿಗೆ ಅಥವಾ ದೈಹಿಕ ಅಪಾಯದೊಂದಿಗೆ ಜೂಜಾಡುವುದರ ಮೇಲೆ ನಿಂತಿರುತ್ತದೆ. ಸಿನಿಮಾ ರಂಗದ ಸಾಹಸ ಕಲಾವಿದರನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಚಿತ್ರವೊಂದು ಸೂಪರ್ ಹಿಟ್ ಆಗಲು ಇವರು ಮಾಡುವ ರಿಸ್ಕ್ ಅತ್ಯಂತ ದೊಡ್ಡದು. ಎತ್ತರದ ಕಟ್ಟಡದಿಂದ ಜಿಗಿಯುವುದು, ಚಲಿಸುವ ವಾಹನಗಳ ನಡುವೆ ಸಾಹಸ ಮಾಡುವುದು ಅಥವಾ ಸ್ಪೋಟಗಳ ನಡುವೆ ನಟಿಸುವುದು ಇವರ ದಿನನಿತ್ಯದ ಕೆಲಸ. ಆದರೆ ಇವರಿಗೆ ಸಿಗುವ ಸಂಭಾವನೆ ಅಥವಾ ಮಾನ್ಯತೆ ತೆರೆಯ ಮೇಲೆ ಕಾಣಿಸಿಕೊಳ್ಳುವ ನಾಯಕ ನಟರಿಗೆ ಸಿಗುವ ಅಲ್ಪ ಪ್ರಮಾಣವೂ ಇರುವುದಿಲ್ಲ. ಇಂತಹ ಸಾಹಸದ ವೇಳೆ ಏನಾದರೂ ಆಯತಪ್ಪಿದರೆ ಅಥವಾ ತಾಂತ್ರಿಕ ದೋಷ ಸಂಭವಿಸಿದರೆ ಅವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಬಹುದು ಅಥವಾ ಪ್ರಾಣವನ್ನೇ ಕಳೆದುಕೊಳ್ಳಬಹುದು. ಇಂತಹ ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ಅವರ ಕುಟುಂಬವನ್ನು ಸಲಹಲು ಯಾವುದೇ ಭದ್ರವಾದ ಉಳಿತಾಯವಾಗಲಿ ಅಥವಾ ವಿಮಾ ಸೌಲಭ್ಯವಾಗಲಿ ಇರುವುದಿಲ್ಲ ಎಂಬುದು ಕಟು ಸತ್ಯ.
ಇನ್ನೊಂದೆಡೆ, ಮರಣ ಬಾವಿಯಂತಹ ಜಾತ್ರೆಯ ಸಾಹಸ ಕಲೆಗಳು ಮತ್ತು ನಮ್ಮ ಮಣ್ಣಿನ ಹೆಮ್ಮೆಯ ಜಾನಪದ ಕಲೆಗಳು ಇಂದು ಆಧುನಿಕತೆಯ ಅಬ್ಬರದಲ್ಲಿ ನಶಿಸುತ್ತಿವೆ. ಹಗಲುವೇಷ, ಕರಡಿ ಮಜಲು, ದೊಡ್ಡಾಟ ಅಥವಾ ಗಾರುಡಿ ಗೊಂಬೆಯಂತಹ ಕಲೆಗಳನ್ನು ನಂಬಿಕೊಂಡಿರುವ ಕಲಾವಿದರ ಸ್ಥಿತಿ ಇನ್ನೂ ದಯನೀಯವಾಗಿದೆ.
ಒಂದು ಕಾಲದಲ್ಲಿ ಹಬ್ಬ, ಜಾತ್ರೆಗಳ ಅವಿಭಾಜ್ಯ ಅಂಗವಾಗಿದ್ದ ಈ ಕಲೆಗಳಿಗೆ ಇಂದು ಪ್ರೋತ್ಸಾಹದ ಕೊರತೆಯಿದೆ. ಈ ಕಲಾವಿದರು ತಮ್ಮ ಕಲೆಯನ್ನೇ ನಂಬಿ ಅಲೆಮಾರಿಗಳಂತೆ ಊರಿಂದ ಊರಿಗೆ ಸಂಚರಿಸುತ್ತಾರೆ. ಸಿನಿಮಾ ಸ್ಟಂಟ್ ಕಲಾವಿದರಿಗಾದರೂ ಒಂದು ಸಂಘಟನೆಯ ಬಲವಿರುತ್ತದೆ, ಆದರೆ ಈ ಗ್ರಾಮೀಣ ಮತ್ತು ಜಾನಪದ ಕಲಾವಿದರು ಸಂಪೂರ್ಣ ಅಸಂಘಟಿತ ವಲಯಕ್ಕೆ ಸೇರಿದವರಾಗಿದ್ದು, ಅವರಿಗೆ ಪಡಿತರ ಚೀಟಿ ಅಥವಾ ಕನಿಷ್ಠ ಆರೋಗ್ಯ ಸೌಲಭ್ಯ ಸಿಗುವುದು ಕೂಡ ದುಸ್ತರವಾಗಿದೆ.
ಮಳೆಗಾಲದಂತಹ ಸಮಯದಲ್ಲಿ ಪ್ರದರ್ಶನಗಳಿಲ್ಲದೆ ಇವರು ಜೀವನ ಸಾಗಿಸುವುದು ಕಡುಕಷ್ಟವಾಗುತ್ತದೆ.
ಯಾವುದೇ ಒಂದು ರಾಷ್ಟ್ರದ ಸಾಂಸ್ಕೃತಿಕ ಮತ್ತು ಕಲಾತ್ಮಕ ಬೆಳವಣಿಗೆಯು ಅಲ್ಲಿನ ಕಲಾವಿದನ ಸುಭದ್ರ ಬದುಕಿನ ಮೇಲೆ ಅವಲಂಬಿತವಾಗಿರುತ್ತದೆ. ಈ ಬಾರಿಯ ಕಾರ್ಮಿಕ ದಿನದಂದು ನಾವು ಈ ಕಲಾವಿದರ ಹಕ್ಕುಗಳ ಬಗ್ಗೆ ದನಿ ಎತ್ತಬೇಕಿದೆ. ಸಾಹಸ ಮತ್ತು ಜಾನಪದ ಕಲಾವಿದರಿಗಾಗಿ ಸರ್ಕಾರವು ಕಾನೂನಾತ್ಮಕ ಮಾನ್ಯತೆ ನೀಡಬೇಕಿದೆ. ಇವರೆಲ್ಲರನ್ನೂ 'ವಿಶೇಷ ವರ್ಗದ ಕಾರ್ಮಿಕರು' ಎಂದು ಗುರುತಿಸಿ ಅವರಿಗೆ ಉಚಿತ ಆರೋಗ್ಯ ವಿಮೆ ಮತ್ತು ಹೆಚ್ಚಿನ ಮೊತ್ತದ ಅಪಘಾತ ಪರಿಹಾರದ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕು.
ಸಿನಿಮಾ ಚಿತ್ರೀಕರಣದ ಸೆಟ್‌ಗಳಲ್ಲಿ ಅಥವಾ ಜಾತ್ರೆಯ ಪ್ರದರ್ಶನ ಸ್ಥಳಗಳಲ್ಲಿ ಕನಿಷ್ಠ ಸುರಕ್ಷತಾ ಮಾನದಂಡಗಳು ಮತ್ತು ವೈದ್ಯಕೀಯ ನೆರವು ಇರುವುದನ್ನು ಕಡ್ಡಾಯಗೊಳಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಈ ಕಲಾವಿದರ ದೈಹಿಕ ಸಾಮರ್ಥ್ಯ ಕುಗ್ಗಿದಾಗ ಅಥವಾ ವಯಸ್ಸಾದಾಗ ಅವರು ಗೌರವಯುತವಾಗಿ ಬದುಕಲು 'ವಿಶೇಷ ಪಿಂಚಣಿ' ಯೋಜನೆಯನ್ನು ಜಾರಿಗೆ ತರಬೇಕು.
ಕಲೆ ಮತ್ತು ಸಾಹಸಗಳು ಸಮಾಜದ ಜೀವಂತಿಕೆಯನ್ನು ಎತ್ತಿ ಹಿಡಿಯುತ್ತವೆ. ಆದರೆ ಆ ಕಲೆಯನ್ನೇ ಜೀವವಾಗಿಸಿಕೊಂಡವರ ಬದುಕು ಕತ್ತಲಲ್ಲಿರಬಾರದು. ಈ ಕಾರ್ಮಿಕ ದಿನದ ಸಂದರ್ಭದಲ್ಲಿ ನಾವು ಕೇವಲ ಅವರ ಪ್ರದರ್ಶನವನ್ನು ನೋಡಿ ಆನಂದಿಸುವುದಷ್ಟೇ ಅಲ್ಲದೆ, ಅವರಿಗೆ ಸಿಗಬೇಕಾದ ಸಾಮಾಜಿಕ ನ್ಯಾಯ ಮತ್ತು ಭದ್ರತೆಯ ಬಗ್ಗೆ ಧ್ವನಿ ಎತ್ತಬೇಕಿದೆ. ಕಲೆ ಉಳಿಯಬೇಕಾದರೆ ಕಲಾವಿದನ ಬದುಕು ಮೊದಲು ಸುಭದ್ರವಾಗಬೇಕು. ಸರ್ಕಾರ ಮತ್ತು ಸಮಾಜಗಳು ಒಗ್ಗೂಡಿ ಈ ಅಸಂಘಟಿತ ಕಲಾವಿದರಿಗೆ ಸೂಕ್ತ ಸ್ಥಾನಮಾನ ನೀಡಿದಾಗ ಮಾತ್ರ ನಮ್ಮ ಪರಂಪರೆ, ಸಿನಿಮಾ ಕಲೆ ಮತ್ತು ಸಾಹಸ ಕಲೆಗಳು ಮುಂದಿನ ಪೀಳಿಗೆಗೂ ಗೌರವಯುತವಾಗಿ ಉಳಿಯಲು ಸಾಧ್ಯ.
✍ ಲಲಿತಶ್ರೀ ಪ್ರೀತಂ ರೈ