image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಶಿರಾಜ್ ಕಾವೂರ್ ನಿರ್ದೇಶನದ ಹಾಸ್ಯಮಯ ಚಿತ್ರ 'ವಾದಿರಾಜ ವಾಲಗ ಮಂಡಳಿ' ಚಿತ್ರೀಕರಣ ಪೂರ್ಣ

ಶಶಿರಾಜ್ ಕಾವೂರ್ ನಿರ್ದೇಶನದ ಹಾಸ್ಯಮಯ ಚಿತ್ರ 'ವಾದಿರಾಜ ವಾಲಗ ಮಂಡಳಿ' ಚಿತ್ರೀಕರಣ ಪೂರ್ಣ

ಮಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದಾ ಹೊಸ ಪ್ರಯೋಗಗಳಿಗೆ ಮನ್ನಣೆ ಸಿಗುತ್ತಲೇ ಇರುತ್ತದೆ. ಇದೀಗ ಅದೇ ಸಾಲಿಗೆ ಸೇರ್ಪಡೆಗೊಳ್ಳಲು ಸಜ್ಜಾಗಿದೆ ವಿಭಿನ್ನ ಶೀರ್ಷಿಕೆಯ "ವಾದಿರಾಜ ವಾಲಗ ಮಂಡಳಿ" ಚಿತ್ರ. ಖ್ಯಾತ ಚಿತ್ರ ನಿರ್ಮಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಚಿತ್ರೀಕರಣವು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇದರ ಮದ್ಯೆ ಚಿತ್ರ ತಂಡ ಪ್ರತ್ರಿಕಾಗೋಷ್ಟಿಯಲ್ಲಿ ತನ್ನ ಅನುಭವ ಹಂಚಿಕೊಂಡರು. 

"ವರಾಹ ರೂಪಂ" ಹಾಡಿನ ಮೂಲಕ ಜನಪ್ರಿಯತೆ ಗಳಿಸಿರುವ ಶಶಿರಾಜ್  ಕಾವೂರು ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಇವರು, ಸುಮಾರು 50 ದಿನಗಳ ಕಾಲ ಎರಡು ಹಂತಗಳಲ್ಲಿ ಚಿತ್ರೀಕರಣವನ್ನು ಮುಗಿಸಿದ್ದಾರೆ. ಕರಾವಳಿ ಕನ್ನಡದ ಸೊಗಡನ್ನು ಹೊಂದಿದ್ದರೂ, ರಾಜ್ಯದ ಎಲ್ಲಾ ಭಾಗದ ಪ್ರೇಕ್ಷಕರಿಗೂ ತಲುಪುವಂತಹ ಸಾರ್ವತ್ರಿಕ ಹಾಸ್ಯ ಹಾಗೂ ಭಾವನಾತ್ಮಕ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ ಎಂದು ಚಿತ್ರದ ನಿರ್ಮಾಪಕರಾದ ಎಮ್ ಎನ್ ರಾಜೇಂದ್ರಕುಮಾರ್ ತಿಳಿಸಿದರು. 

ಚಿತ್ರದಲ್ಲಿ ನವೀನ್ ಪಡೀಲ್, ಪ್ರಕಾಶ್ ತುಮಿನಾಡು, ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ ಹಾಗೂ ಪುಷ್ಪರಾಜ್ ಬೊಳ್ಳೂರು ಅವರಂತಹ ದಿಗ್ಗಜ ಕಲಾವಿದರ ದಂಡೇ ಇದೆ. ಅರ್ಜುನ್ ವೇದಾಂತ ಮತ್ತು ಅರ್ಥವ್ ಪ್ರಕಾಶ್ ನಾಯಕ ನಟರಾಗಿ ಕಾಣಿಸಿಕೊಂಡರೆ, ತನ್ವಿ ರಾವ್ ಮತ್ತು ವೇಣ್ಯ ರೈ ನಾಯಕಿಯರಾಗಿ ಅಭಿನಯಿಸಿದ್ದಾರೆ.
 ವಿಶೇಷವಾಗಿ ಈ ಚಿತ್ರಕ್ಕೆ "Arri LF" ಕ್ಯಾಮೆರಾವನ್ನು ಬಳಸಲಾಗಿದ್ದು, ಅನುಭವಿ ಛಾಯಾಗ್ರಾಹಕ ಎಸ್. ಚಂದ್ರಶೇಖರ್ ಅವರ ದೃಶ್ಯವೈಭವ ಚಿತ್ರಕ್ಕಿದೆ. ಮಣಿಕಾಂತ್ ಕದ್ರಿ ಅವರ ಸಂಗೀತ ಸಂಯೋಜನೆ ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.
ಈಗಾಗಲೇ ಕುತೂಹಲ ಮೂಡಿಸಿರುವ "ವಾದಿರಾಜ ವಾಲಗ ಮಂಡಳಿ" ಚಿತ್ರವನ್ನು ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ. ಎಂ.ಎನ್.ಆರ್ ಪ್ರೊಡಕ್ಷನ್ ಅಡಿಯಲ್ಲಿ ಅದ್ಧೂರಿಯಾಗಿ ಸಿದ್ಧವಾಗಿರುವ ಈ ಹಾಸ್ಯಮಯ ಚಿತ್ರವು ಮುಂದಿನ ದಿನಗಳಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವ ಭರವಸೆ ಮೂಡಿಸಿದೆ.

Category
ಕರಾವಳಿ ತರಂಗಿಣಿ