ಬೆಂಗಳೂರು: ಸ್ಯಾಂಡಲ್‌ವುಡ್‌ನ 'ನಟ ರಾಕ್ಷಸ' ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ 'ಅಣ್ಣ ಫ್ರಮ್ ಮೆಕ್ಸಿಕೋ' ಚಿತ್ರದ ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಚಿತ್ರಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಟೀಸರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಸಾಥ್ ನೀಡಿದರು.
ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, "ಚಿತ್ರದ ಟೀಸರ್ ಅತ್ಯಂತ ಥ್ರಿಲ್ಲಿಂಗ್ ಆಗಿದೆ ಮತ್ತು ತಾಂತ್ರಿಕವಾಗಿ ಬಹಳ ಶ್ರೀಮಂತವಾಗಿ ಮೂಡಿಬಂದಿದೆ. ಧನಂಜಯ್ ಅವರ ನಟನೆ ಅದ್ಭುತವಾಗಿದ್ದು, ವಿಶೇಷವಾಗಿ ಅವರು ಧರಿಸಿರುವ ಕರ್ನಾಟಕದ ಮ್ಯಾಪ್ ಇರುವ ಲಾಕೆಟ್ ನನ್ನ ಗಮನ ಸೆಳೆಯಿತು. ಕನ್ನಡ ಚಿತ್ರರಂಗಕ್ಕೆ ನಮ್ಮದೂ ಒಂದು ಕೊಡುಗೆ ಇರಲಿ ಎಂಬ ಆಶಯದೊಂದಿಗೆ ಈ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದೇವೆ. ಕಥೆ ತುಂಬಾ ವಿಭಿನ್ನವಾಗಿದ್ದು, ಚಾಮುಂಡೇಶ್ವರಿಯ ಆಶೀರ್ವಾದದೊಂದಿಗೆ ಈ ಸುಂದರ ಪ್ರಯಾಣ ಆರಂಭಿಸಿದ್ದೇವೆ" ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಟ ಧನಂಜಯ್ ಮಾತನಾಡಿ, "ಈ ಸಿನಿಮಾ ಜರ್ನಿ ಶುರುವಾಗಿದ್ದು ಒಂದು ಆಕಸ್ಮಿಕ. 'ಹೊಯ್ಸಳ' ಚಿತ್ರದ ಶೂಟಿಂಗ್ ವೇಳೆ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆಗೆ ಹೋದಾಗ ಸಿನಿಮಾ ನಿರ್ಮಾಣದ ಬಗ್ಗೆ ಚರ್ಚೆ ನಡೆದಿತ್ತು. ಸಚಿವರು ಮತ್ತು ಅವರ ಕುಟುಂಬದವರು ಸಿನಿಮಾ ಮಾಡುತ್ತಿದ್ದಾರೆ ಅಂದಾಗ ಜವಾಬ್ದಾರಿ ಹೆಚ್ಚಿತ್ತು. ಕೇವಲ ಆಕ್ಷನ್ ಮಾತ್ರವಲ್ಲದೆ, ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದಾಗಬೇಕು ಎಂಬ ಉದ್ದೇಶದಿಂದ 'ಬಡವ ರಾಸ್ಕಲ್' ನಿರ್ದೇಶಕ ಶಂಕರ್ ಗುರು ಅವರನ್ನು ಈ ಪ್ರಾಜೆಕ್ಟ್‌ಗೆ ಆಯ್ಕೆ ಮಾಡಿಕೊಂಡೆವು" ಎಂದು ಚಿತ್ರದ ಹಿನ್ನೆಲೆಯನ್ನು ಹಂಚಿಕೊಂಡರು.
'ಬಡವ ರಾಸ್ಕಲ್' ಚಿತ್ರದ ಸೂಪರ್ ಹಿಟ್ ಕಾಂಬಿನೇಷನ್ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದು, ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ವಾಸುಕಿ ವೈಭವ್ ಸಂಗೀತ ನೀಡಿದ್ದು, ಐರಾ ಫಿಲ್ಮ್ಸ್ ಹಾಗೂ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಶಾಸಕಿ ನಯನಾ ಮೋಟಮ್ಮ ಸೇರಿದಂತೆ ಚಿತ್ರತಂಡದ ಹಲವು ಗಣ್ಯರು ಉಪಸ್ಥಿತರಿದ್ದರು.