ಆದರ್ಶ ಗುಂಡುರಾಜ್ ಅಭಿನಯದ 'ಕ್ಯಾಲೆಂಡರ್' ಚಿತ್ರವು ಕನ್ನಡದಲ್ಲಿ ಭರ್ಜರಿ ಯಶಸ್ಸು ಕಂಡ ನಂತರ, ಇದೀಗ ಹಿಂದಿ ಭಾಷೆಯಲ್ಲೂ ತೆರೆಗೆ ಬರಲು ಸಿದ್ಧವಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಏಪ್ರಿಲ್ 24ರಂದು ಹಿಂದಿ ಅವತರಣಿಕೆಯಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಹಾಗೂ ನಿರ್ಮಾಪಕ ಆದರ್ಶ ಗುಂಡುರಾಜ್, "ನಮ್ಮ ಚಿತ್ರವು ಮಹಿಳಾ ಪ್ರಧಾನವಾಗಿದ್ದು, ಉತ್ತಮ ಕಂಟೆಂಟ್ ಹೊಂದಿದೆ. ಏಪ್ರಿಲ್ 6ರಂದು ಕನ್ನಡದಲ್ಲಿ ಬಿಡುಗಡೆಯಾದಾಗ ಎಲ್ಲರೂ ಮೆಚ್ಚಿಕೊಂಡರು. ಹೆಸರಾಂತ ವಿ.ಕೆ ಫಿಲಂಸ್ (ಹೊಂಬಾಳೆ) ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿದ್ದು, ಈಗಲೂ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದೊಂದು ಸಾರ್ವತ್ರಿಕ ವಿಷಯ ಹೊಂದಿರುವ ಚಿತ್ರವಾದ್ದರಿಂದ ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ ನಗರಗಳ ಮಲ್ಟಿಪ್ಲೆಕ್ಸ್ಗಳಲ್ಲಿ ಹಿಂದಿಯಲ್ಲೂ ಬಿಡುಗಡೆ ಮಾಡುತ್ತಿದ್ದೇವೆ," ಎಂದು ಮಾಹಿತಿ ನೀಡಿದರು.
ಚಿತ್ರತಂಡದ ಪ್ರಕಾರ, ಈಗಾಗಲೇ ಬಿಡುಗಡೆಯಾಗಿರುವ ಹಿಂದಿ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ವಿದೇಶಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಓಟಿಟಿ ಹಾಗೂ ವಾಹಿನಿ ಪ್ರಸಾರದ ಹಕ್ಕುಗಳ ಕುರಿತು ಮಾತುಕತೆ ಪ್ರಗತಿಯಲ್ಲಿದೆ. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ನವೀನ್ ಶಕ್ತಿ, ಸಹ ನಿರ್ಮಾಪಕ ಮತ್ತು ನಟ ಶಿವಪ್ರದೀಪ್ ಹಾಗೂ ಸಹ ನಿರ್ದೇಶಕ ಮಹಾಂತೇಶ್ ಉಪಸ್ಥಿತರಿದ್ದರು.