ಮಂಗಳೂರು: ಪ್ರಾರ್ಥನಾ ಕ್ರಿಯೇಷನ್ಸ್ ಮಂಗಳೂರು ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಬಹುಭಾಷೆಯ 'ಕೊರಗ್ಲಾ ತನಿಯಾ' (ಕೊರಗಜ್ಜ) ಹಾಗೂ ತುಳು ಚಲನಚಿತ್ರ 'ಕನ' ಚಿತ್ರಗಳ ಮುಹೂರ್ತ ಸಮಾರಂಭವು ಎಪ್ರಿಲ್ 23ರ ಗುರುವಾರ ಬೆಳಿಗ್ಗೆ 9 ಗಂಟೆಗೆ ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನೆರವೇರಲಿದೆ ಎಂದು ಆರ್. ಧನರಾಜ್ ತಿಳಿಸಿದರು. ಅವರು ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆರ್. ಧನರಾಜ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಕೊರಗ್ಲಾ ತನಿಯಾ' ಸಿನಿಮಾಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರಂಭ ಫಲಕ ತೋರಿಸಲಿದ್ದಾರೆ. ಚಿತ್ರದುರ್ಗದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಕ್ಯಾಮರಾ ಚಾಲನೆ ಮಾಡಲಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಇದೇ ವೇದಿಕೆಯಲ್ಲಿ ವಿಶ್ವನಾಥ್ ಕೋಡಿಕಲ್ ನಿರ್ದೇಶನದ 'ಕನ' ತುಳು ಚಿತ್ರಕ್ಕೂ ಚಾಲನೆ ಸಿಗಲಿದ್ದು, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಆರಂಭ ಫಲಕ ತೋರಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ಖ್ಯಾತ ನಟ ಸುಮನ್ ತಲ್ವಾರ್ ಅವರು ದೀಪ ಬೆಳಗಿಸಲಿದ್ದು, ಶಾಸಕ ಸಿ.ಬಿ. ಸುರೇಶ್ ಬಾಬು ಕ್ಯಾಮರಾ ಚಾಲನೆ ಮಾಡಲಿದ್ದಾರೆ.
'ಕೊರಗ್ಲಾ ತನಿಯಾ' ಚಿತ್ರಕ್ಕೆ ಆರ್. ಧನರಾಜ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. 'ಕನ' ಚಿತ್ರಕ್ಕೆ ವಿಶ್ವನಾಥ್ ಕೋಡಿಕಲ್ ಕಥೆ-ಸಂಭಾಷಣೆ ಒದಗಿಸುತ್ತಿದ್ದಾರೆ. ಅರ್ಚನಾ ಶೆಟ್ಟಿ ಅವರು ಎರಡೂ ಸಿನಿಮಾಗಳಿಗೆ ಸಹ ನಿರ್ಮಾಪಕಿಯಾಗಿದ್ದಾರೆ. ಈ ಸಮಾರಂಭದಲ್ಲಿ ಸಂಸದರು, ಶಾಸಕರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.