ಮಂಗಳೂರು: ಪ್ರತಿಷ್ಠಿತ 79ನೇ ಕ್ಯಾನ್ಸ್ ಚಲನಚಿತ್ರೋತ್ಸವದ ‘ಮಾರ್ಶೆ ಡು ಫಿಲ್ಮ್’ (Marché du Film) ವಿಭಾಗಕ್ಕೆ ಮಂಗಳೂರು ಮೂಲದ 22 ವರ್ಷದ ಪ್ರತಿಭಾವಂತ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರ ಚೊಚ್ಚಲ ನಿರ್ದೇಶನದ ‘ಸೆಪ್ಟಂಬರ್ 21’ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ. ಆಲ್ಝೈಮರ್ ಹಾಗೂ ಆರೈಕೆದಾರರ ಭಾವನಾತ್ಮಕ ಸಂಬಂಧದ ಕುರಿತಾದ ಈ ಹಿಂದಿ-ಕನ್ನಡ ದ್ವಿಭಾಷಾ ಚಿತ್ರವು ಮೇ 16 ರಂದು ಸಂಜೆ 5:45ಕ್ಕೆ ಕ್ಯಾನ್ಸ್‌ನ ಪಲೈಸ್ ಥಿಯೇಟರ್‌ನಲ್ಲಿ ವಿಶ್ವ ಪ್ರೀಮಿಯರ್ ಕಾಣುವ ಮೂಲಕ ಜಾಗತಿಕ ವೇದಿಕೆಯಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಲಿದೆ.
ವಿಸಿಕಾ ಫಿಲ್ಮ್ಸ್, ಎಫ್‌ಎಂಡಿ ಪ್ರೊಡಕ್ಷನ್ಸ್ ಮತ್ತು ಹಮಾರಾಮೂವಿ ಜೊತೆಗೆ ಫಿಲ್ಮ್ಸ್‌ಮ್ಯಾಕ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಖ್ಯಾತ ನಟಿಯರಾದ ಪ್ರಿಯಾಂಕಾ ಉಪೇಂದ್ರ, ಜರೀನಾ ವಹಾಬ್ ಸೇರಿದಂತೆ ಪ್ರವೀಣ್ ಸಿಂಗ್ ಸಿಸೋಡಿಯಾ, ಅಜಿತ್ ಶಿಧಯೆ ಮತ್ತು ಅಮಿತ್ ಬೆಹ್ಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ತಂದೆ ಮತ್ತು ಅವರ ಆರೈಕೆಯ ಹೊಣೆ ಹೊತ್ತ ಮಗನ ನಡುವಿನ ಸಂಘರ್ಷ ಹಾಗೂ ಭಾವನಾತ್ಮಕ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.
ವಿಶೇಷವೆಂದರೆ, ಕ್ಯಾನ್ಸ್‌ನಲ್ಲಿ ಪಾದಾರ್ಪಣೆ ಮಾಡುತ್ತಿರುವ ಅತ್ಯಂತ ಕಿರಿಯ ಭಾರತೀಯ ನಿರ್ದೇಶಕಿಯರಲ್ಲಿ ಕರೆನ್ ಸುವರ್ಣ ಒಬ್ಬರಾಗಿದ್ದಾರೆ. ರಾಜಶೇಖರ್ ಸಂಭಾಷಣೆ ಮತ್ತು ವಿನಯ್ ಚಂದ್ರಾ ಅವರ ಸಂಗೀತವಿರುವ ಈ ಚಿತ್ರವು ಸಾಮಾಜಿಕ ಕಳಕಳಿಯೊಂದಿಗೆ ಅಂತರಾಷ್ಟ್ರೀಯ ಸಿನಿಪ್ರಿಯರ ಗಮನ ಸೆಳೆಯಲು ಸಜ್ಜಾಗಿದೆ.