ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ಜನಪ್ರಿಯ ನಟ ದಿಗಂತ್, ಇದೀಗ "ರುದ್ರ ಕಾಲ" ಎಂಬ ನೂತನ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಶೀರ್ಷಿಕೆಯಲ್ಲೇ ಭಾರಿ ಕುತೂಹಲ ಮೂಡಿಸಿರುವ ಈ ಚಿತ್ರದ ಟೈಟಲ್ ಲಾಂಚ್ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು. ವಿಶೇಷವೆಂದರೆ, ದಕ್ಷಿಣ ಭಾರತದ ಖ್ಯಾತ ಸ್ಟಾರ್ ಹಿರೋಯಿನ್ ಸಮಂತಾ ಅವರು ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ನಟ ದಿಗಂತ್, ನಿರ್ದೇಶಕ ಗೋಪಿ ಅವರು ಕಥೆ ಹೇಳುತ್ತಿದ್ದಾಗಲೇ ಈ ಚಿತ್ರದಲ್ಲಿ ನಟಿಸಬೇಕೆಂದು ನಿರ್ಧಾರ ಮಾಡಿದ್ದೆ. ನಮ್ಮ "ರುದ್ರ ಕಾಲ" ಚಿತ್ರದ ಟೈಟಲ್ ಸಮಂತಾ ಅವರ ಕೈಯಿಂದ ಬಿಡುಗಡೆಯಾಗಿರುವುದು ತುಂಬಾ ಸಂತೋಷ ನೀಡಿದೆ. ಈ ಚಿತ್ರವು ಪ್ರೇಕ್ಷಕರಿಗೆ ಖಂಡಿತವಾಗಿಯೂ ಮೆಚ್ಚುಗೆಯಾಗುತ್ತದೆ ಎಂಬ ಭರವಸೆ ನನಗಿದೆ ಎಂದು ತಿಳಿಸಿದರು.
ಚಿತ್ರದ ನಿರ್ದೇಶಕ ಗೋಪಿ ಮಾತನಾಡಿ, ನಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿಕೊಟ್ಟ ಸಮಂತಾ ಅವರಿಗೆ ಧನ್ಯವಾದಗಳು. ಇದು ನಮ್ಮ ಚಿತ್ರದ ಶುಭಾರಂಭ ಎಂದು ಭಾವಿಸುತ್ತೇನೆ. "ರುದ್ರ ಕಾಲ" ಚಿತ್ರದ ಚಿತ್ರೀಕರಣ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ. ಒಂದೇ ಹಂತದ ಚಿತ್ರೀಕರಣ ನಡೆಸಿ ಅದಷ್ಟು ಬೇಗ ತೆರೆಗೆ ತರುವ ಯೋಚನೆ ಇದೆ ಎಂದು ತಮ್ಮ ಯೋಜನೆಗಳನ್ನು ಹಂಚಿಕೊಂಡರು. ಇದು ಗೋಪಿ ಅವರ ನಿರ್ದೇಶನದ ನಾಲ್ಕನೇ ಚಿತ್ರವಾಗಿದೆ.
ನಿರ್ಮಾಪಕ ರಮೇಶ್ ನಾಯ್ಕ್ ಮಾತನಾಡಿ, ಡೈರೆಕ್ಟರ್ ಗೋಪಿ ಹೇಳಿದ ಸ್ಕ್ರಿಪ್ಟ್ ನನಗೆ ತುಂಬಾ ಫ್ರೆಶ್ ಆಗಿ ಅನಿಸಿತು. ನಮ್ಮ ಪ್ರೊಡಕ್ಷನ್‌ನಲ್ಲಿ ಇಂಥ ವಿಭಿನ್ನ ಚಿತ್ರ ಬರುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಟೈಟಲ್ ರಿಲೀಸ್ ಮಾಡಿದ ನಟಿ ಸಮಂತಾ ಹಾಗೂ ನಾಯಕ ದಿಗಂತ್ ಅವರಿಗೆ ನನ್ನ ಧನ್ಯವಾದಗಳು ಎಂದರು.
ಈ ಚಿತ್ರಕ್ಕೆ ಕ್ರಿಸ್ಟೋಫರ್ ಜೋಸೆಫ್ ಛಾಯಾಗ್ರಹಣ ಮಾಡುತ್ತಿದ್ದು, ರಮೇಶ್ ಕೆ ಪೂಜಾರಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೈನ್ ಪ್ರೊಡ್ಯೂಸರ್ ಆಗಿ ನವೀನ್ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಶಿವರಾಜ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಇದೇ ತಿಂಗಳ 22 ರಂದು ಅದ್ಧೂರಿಯಾಗಿ ನೆರವೇರಲಿದೆ.