ಬೆಂಗಳೂರು : ಭಕ್ತಿಪ್ರಧಾನ ಚಲನಚಿತ್ರ ‘ಸಂಕೀರ್ತನ’ ಏಪ್ರಿಲ್ 17ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲಿದೆ. ಕೆ. ಪದ್ಮಕಲಾ ಗುಂಡೂರಾವ್ ಅರ್ಪಿಸುವ ‘ಸಾಫಲ್ಯ ಮೂವೀಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದ್ದು, ಚಿತ್ರದ ನಿರ್ದೇಶಕ ಡಿ.ಎಸ್. ಮಂಜುನಾಥ್ (ಕಲಾಗಂಗೋತ್ರಿ ಮಂಜು) ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದಾಸ ಶ್ರೇಷ್ಠರ ಮಹಿಮೆಯ ಕೀರ್ತನೆಗಳ ಸಂಗಮವೇ ಈ ‘ಸಂಕೀರ್ತನ’ ಚಿತ್ರ. ಕರ್ನಾಟಕದ ಸುವರ್ಣಯುಗ ಎನ್ನಲಾದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಕಾಲದಲ್ಲಿ ಅವತರಿಸಿದ ಯತಿಶ್ರೇಷ್ಠರು ಮತ್ತು ಕವಿಶ್ರೇಷ್ಠರ ಪರಸ್ಪರ ಸಮಾಗಮ, ಮಹಿಮಾ ಪ್ರದರ್ಶನ ಹಾಗೂ ಕೀರ್ತನ ಗಾಯನದ ಅದ್ಭುತ ಇತಿಹಾಸವನ್ನು ಈ ಚಿತ್ರ ಒಳಗೊಂಡಿದೆ. ಬೇಲೂರು ಕೇಶವ ದಾಸರ ‘ಭಕ್ತ ವಿಜಯ’ ಮತ್ತು ಇತರೆ ಐತಿಹಾಸಿಕ ಗ್ರಂಥಗಳನ್ನು ಅನುಸರಿಸಿ ಈ ಚಿತ್ರವನ್ನು ಸಿದ್ಧಪಡಿಸಲಾಗಿದ್ದು, ಬೆಳ್ಳಿಪರದೆಯ ಇತಿಹಾಸದಲ್ಲಿ ಇದೊಂದು ಅಪೂರ್ವ ಸಾಧನೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.
ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು, ವೈಕುಂಠ ದಾಸರು, ಪುರಂದರದಾಸರು, ಕನಕದಾಸರು ಹಾಗೂ ಕುಮಾರವ್ಯಾಸ ಮತ್ತು ತಿಮ್ಮಣ್ಣ ಕವಿಯಂತಹ ಮಹಾನ್ ಚೇತನಗಳ ಮಹಿಮೆಗಳ ಮಹಾಸಂಗಮವೇ ಈ ಚಿತ್ರದ ಜೀವಾಳ. ಈ ಚಿತ್ರವನ್ನು ಎಲ್ಲ ಸಮಾಜದ ಬಂಧುಗಳು ವೀಕ್ಷಿಸಿ ಭಕ್ತಿ ಸಾಗರವನ್ನು ಉಳಿಸಿ ಬೆಳೆಸಬೇಕು ಎಂದು ನಿರ್ಮಾಪಕಿ ಕೆ. ಪದ್ಮಕಲಾ ಗುಂಡೂರಾವ್ ವಿನಂತಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಶ್ರೀಪಾದರಾಜರ ಪಾತ್ರದಲ್ಲಿ ಹಿರಿಯ ಕಲಾವಿದ ರಮೇಶ್ ಭಟ್, ವ್ಯಾಸರಾಯರಾಗಿ ಡಾ. ಶ್ರೀಧರ್, ವಾದಿರಾಜರಾಗಿ ನಟರಾಜ, ಪುರಂದರದಾಸರಾಗಿ ವಿಜಯಾನಂದ ನಾಯಕ್ ಹಾಗೂ ವೈಕುಂಠ ದಾಸರಾಗಿ ರಾಮಕೃಷ್ಣ ನಟಿಸಿದ್ದಾರೆ. ನಾಯಕಿಯ ಪಾತ್ರದಲ್ಲಿ ಕೆ. ಪದ್ಮಕಲಾ ಗುಂಡೂರಾವ್ ಕಾಣಿಸಿಕೊಂಡರೆ, ಕನಕದಾಸರ ಪಾತ್ರದಲ್ಲಿ ನಂಜುಂಡ ಅಜಯರಾಜ್ ಅಭಿನಯಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಎಂ.ಎಸ್. ಸಿದ್ದರಾಜು ಛಾಯಾಗ್ರಹಣ, ಜೆ.ಎಂ. ಪ್ರಹ್ಲಾದ್ ಕಥೆ-ಚಿತ್ರಕಥೆ, ಪ್ರವೀಣ್ ಡಿ ರಾವ್ ಸಂಗೀತ ಮತ್ತು ಸುರೇಶ್ ಅರಸ್ ಸಂಕಲನ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಕೆ. ಪದ್ಮಕಲಾ ಗುಂಡೂರಾವ್, ಜೆ.ಎಂ. ಪ್ರಹ್ಲಾದ್, ಡಿ.ಎಸ್. ಮಂಜುನಾಥ್ ಹಾಗೂ ಎಚ್. ವಿಜಯ್ ಭಾಸ್ಕರ್ ಅವರು ಬಂಡವಾಳ ಹೂಡಿದ್ದಾರೆ. ಸದ್ಯ ರಾಜ್ಯಾದ್ಯಂತ ಪ್ರಚಾರ ಕಾರ್ಯ ಕೈಗೊಂಡಿರುವ ಚಿತ್ರತಂಡ, ಸಿನಿಮಾ ಮಂದಿರಗಳಲ್ಲಿ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದೆ.