ಬೆಂಗಳೂರಿನ ಭೂಗತ ಲೋಕದ ಕರಾಳ ಮುಖ ಹಾಗೂ ಒಂದು ರೋಚಕ ಕೊಲೆ ರಹಸ್ಯದ ಕಥೆ ಹೊತ್ತ 'ಬೆಂಗಳೂರು ಇನ್' ಚಿತ್ರದ ಭರ್ಜರಿ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ ಚೇತನ್ ಅಹಿಂಸಾ ಟ್ರೈಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಧರ್ಮ ಕೀರ್ತಿರಾಜ್, "ಈ ಸಿನಿಮಾದಲ್ಲಿ ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲವಿರುವ ಪಿಜ್ಜಾ ಡೆಲಿವರಿ ಬಾಯ್ ಪಾತ್ರ ಮಾಡಿದ್ದೇನೆ. ಇದೊಂದು ವಿಭಿನ್ನ ಲವ್ ಸ್ಟೋರಿ ಹಾಗೂ ಸಸ್ಪೆನ್ಸ್ ಒಳಗೊಂಡ ಚಿತ್ರ" ಎಂದು ಮಾಹಿತಿ ಹಂಚಿಕೊಂಡರು.
ಅಲ್ಲದೆ, ತಮ್ಮ ಕಷ್ಟದ ದಿನಗಳಲ್ಲಿ ಬೆನ್ನೆಲುಬಾಗಿ ನಿಂತ ನಿರ್ಮಾಪಕ ವೆಂಕಟೇಶಮೂರ್ತಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಸೋಲು-ಗೆಲುವಿನ ನಡುವೆಯೂ ತಾವು ಎಂದಿಗೂ ಕುಗ್ಗಿಲ್ಲ ಎಂದು ಭಾವುಕರಾಗಿ ನುಡಿದರು.
ಕಾರ್ತಿಕ್ ಕೆ. ಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ರಿಷಾ ಗೌಡ ಮತ್ತು ಅನುಷಾ ರೈ ನಾಯಕಿಯರಾಗಿ ನಟಿಸಿದ್ದು, ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ನೈಜ ಘಟನೆಯಿಂದ ಪ್ರೇರಿತವಾದ ಈ ಚಿತ್ರವು ಯುವಜನತೆಗೆ ಜಾಗೃತಿ ಮೂಡಿಸುವ ಸಂದೇಶದ ಜೊತೆಗೆ ಪಕ್ಕಾ ಕಮರ್ಷಿಯಲ್ ಎಲಿಮೆಂಟ್‌ಗಳನ್ನು ಒಳಗೊಂಡಿದೆ. ಶ್ರೀ ಸಾಯಿಬಾಬಾ ಸಿನಿ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 'ಬೆಂಗಳೂರು ಇನ್', ಇದೇ ಏಪ್ರಿಲ್ 17 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.