ಮಂಗಳೂರು: ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನ ಹಾಗೂ ಡೋಲ್ಪಿ ಡಿಸೋಜ ನಿರ್ಮಾಣದ ಬಹುನಿರೀಕ್ಷಿತ ತುಳು ಚಲನಚಿತ್ರ **"90 ಎಮ್ ಎಲ್"** ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆಕಂಡಿದೆ. ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಚಿತ್ರಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಬೆಂಜನಪದವು ಕೊರಗಜ್ಜ ಕ್ಷೇತ್ರದ ವಿಜಯ ಅವರು ಮಾತನಾಡಿ, ತುಳುವಿನಲ್ಲಿ ಸದಭಿರುಚಿಯ ಚಿತ್ರಗಳು ಬರುತ್ತಿರುವುದು ಸಂತಸದ ಸಂಗತಿ. ಈ ಸಿನಿಮಾ ಪ್ರೇಕ್ಷಕರ ಮನ ಗೆದ್ದು ಯಶಸ್ವಿಯಾಗಲಿ ಎಂದು ಹಾರೈಸಿದರು. ಚಿತ್ರದ ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಚಿತ್ರದ ಶೀರ್ಷಿಕೆ ವಿಭಿನ್ನವಾಗಿದ್ದು ಮಲಯಾಳಂ ಶೈಲಿಯ ಗುಣಮಟ್ಟ ಹೊಂದಿದೆ ಎಂದರು. ಲಾಂಚುಲಾಲ್ ಕೆ.ಎಸ್. ಹಾಗೂ ನಟ ಅರ್ಜುನ್ ದೇವ್ ಅವರು ಕೂಡ ಚಿತ್ರತಂಡಕ್ಕೆ ಶುಭ ಕೋರಿದರು.
ದಕ್ಷಿಣ ಕನ್ನಡದ ವಿವಿಧ ಮನೋಹರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಕಾರ್ಕಳ ಸೇರಿದಂತೆ ಹಲವು ಕೇಂದ್ರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಚಿತ್ರದಲ್ಲಿ ಖ್ಯಾತ ಕಲಾವಿದರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ವಿನೀತ್ ಕುಮಾರ್, ರುಹಾನಿ ಶೆಟ್ಟಿ, ಉಮೇಶ್ ಮಿಜಾರ್ ಹಾಗೂ ದೀಪಕ್ ರೈ ಪಾಣಾಜೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರಂಜಿತ್ ಸಿ ಬಜಾಲ್ ಅವರ ಕಥೆ ಮತ್ತು ನಿರ್ದೇಶನವಿರುವ ಈ ಚಿತ್ರಕ್ಕೆ ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದು, ತುಳಸಿದಾಸ್ ಮಂಜೇಶ್ವರ್ ಸಂಭಾಷಣೆ ಬರೆದಿದ್ದಾರೆ. ಹಾಸ್ಯದ ಜೊತೆಗೆ ಉತ್ತಮ ಕಥಾವಸ್ತುವನ್ನು ಹೊಂದಿರುವ '90 ಎಮ್ ಎಲ್' ತುಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವ ಭರವಸೆ ಮೂಡಿಸಿದೆ. ಸಮಾರಂಭದಲ್ಲಿ ಚಿತ್ರದ ನಟ-ನಟಿಯರು ಹಾಗೂ ತಾಂತ್ರಿಕ ವರ್ಗದವರು ಉಪಸ್ಥಿತರಿದ್ದರು.