ಮಂಗಳೂರು: ಕರಾವಳಿಯ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದ "90 ಎಮ್ ಎಲ್" ತುಳು ಚಲನಚಿತ್ರವು ಏಪ್ರಿಲ್ 10 ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ. ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಕರಾವಳಿಯಾದ್ಯಂತ ಮನರಂಜನೆಯ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ಚಿತ್ರದ ನಾಯಕ ನಟ ವಿನೀತ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಂಜಿತ್ ಸಿ. ಬಜಾಲ್ ಅವರ ನಿರ್ದೇಶನ ಹಾಗೂ ಡೋಲಿ ಡಿ ಸೋಜ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವು ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಸುಳ್ಯ, ದೇರಳಕಟ್ಟೆ, ಸುರತ್ಕಲ್ ಮತ್ತು ಪಡುಬಿದ್ರಿ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗ ರಮಣೀಯ ತಾಣಗಳಲ್ಲಿ ಚಿತ್ರೀಕರಣ ನಡೆಸಿರುವುದು ಈ ಸಿನಿಮಾದ ವಿಶೇಷತೆಗಳಲ್ಲೊಂದು.
ಚಿತ್ರದಲ್ಲಿ ವಿನೀತ್ ಕುಮಾರ್ ಅವರಿಗೆ ಜೋಡಿಯಾಗಿ ರುಹಾನಿ ಶೆಟ್ಟಿ ನಟಿಸಿದ್ದು, ತುಳು ಚಿತ್ರರಂಗದ ದಿಗ್ಗಜರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಉಮೇಶ್ ಮಿಜಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಅರ್ಜುನ್ ಎಂ.ವಿ ಅವರ ಛಾಯಾಗ್ರಹಣ ಹಾಗೂ ಸೃಜನ್ ಕುಮಾರ್ ತೋನ್ಸೆ ಅವರ ಸಂಗೀತ ಚಿತ್ರಕ್ಕಿದ್ದು, ಪಕ್ಕಾ ಹಾಸ್ಯ ಮನರಂಜನೆಯ ಪ್ಯಾಕೇಜ್ ಇದಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.