image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಿಳಾ ಸಬಲೀಕರಣಕ್ಕೆ ಒತ್ತು: ಬೆಂಗಳೂರಿನಲ್ಲಿ ಏಪ್ರಿಲ್ 11ರಿಂದ ಆರ್‌ಸಿಬಿ ಅಂತರರಾಷ್ಟ್ರೀಯ ಚಿತ್ರೋತ್ಸವ ಆರಂಭ

ಮಹಿಳಾ ಸಬಲೀಕರಣಕ್ಕೆ ಒತ್ತು: ಬೆಂಗಳೂರಿನಲ್ಲಿ ಏಪ್ರಿಲ್ 11ರಿಂದ ಆರ್‌ಸಿಬಿ ಅಂತರರಾಷ್ಟ್ರೀಯ ಚಿತ್ರೋತ್ಸವ ಆರಂಭ

ಬೆಂಗಳೂರು: ಮಹಿಳಾ ಸಬಲೀಕರಣ ಹಾಗೂ ಚಲನಚಿತ್ರ ರಂಗದ ತಾಂತ್ರಿಕ ವಿಭಾಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ವೃತ್ತಿಪರ ತರಬೇತಿ ನೀಡುವ ಉದಾತ್ತ ಉದ್ದೇಶದೊಂದಿಗೆ, ರೋಟರಿ ಕ್ಲಬ್‌ ಆಫ್ ಬೆಂಗಳೂರು (ಆರ್‌ಸಿಬಿ) ವತಿಯಿಂದ ‘ಆರ್‌ಸಿಬಿ ಅಂತರರಾಷ್ಟ್ರೀಯ ಚಿತ್ರೋತ್ಸವ’ದ ಮೂರನೇ ಆವೃತ್ತಿಯನ್ನು ಆಯೋಜಿಸಲಾಗಿದೆ. ನಗರದ ರೇಸ್‌ಕೋರ್ಸ್‌ ರಸ್ತೆಯ ಭಾರತೀಯ ವಿದ್ಯಾ ಭವನದ ಖಿಂಚ ಸಭಾಂಗಣದಲ್ಲಿ ಏಪ್ರಿಲ್ 11 ಮತ್ತು 12ರಂದು ಈ ಚಲನಚಿತ್ರ ಹಬ್ಬ ನಡೆಯಲಿದೆ.

ಏಪ್ರಿಲ್ 11ರಂದು ಬೆಳಿಗ್ಗೆ 11 ಗಂಟೆಗೆ ಖ್ಯಾತ ನಟಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ ಅವರು ಈ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿಶೇಷವೆಂದರೆ, ರೋಟರಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಮಹಾಸಂಘ (FIPRESCI) ಮತ್ತು ಭಾರತದ ಚಲನಚಿತ್ರ ಸೊಸೈಟಿಗಳ ಮಹಾಸಂಘದ (FFSI) ಸಹಯೋಗದೊಂದಿಗೆ ಈ ಕಾರ್ಯಕ್ರಮ ಮೂಡಿಬರುತ್ತಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸಿನಿಮೋತ್ಸವದಲ್ಲಿ ವಿಯೆಟ್ನಾಂ, ಇರಾನ್, ಭೂತಾನ್ ಮತ್ತು ಖಝಕಿಸ್ತಾನ್ ಸೇರಿದಂತೆ ವಿವಿಧ ದೇಶಗಳ ಪ್ರಶಸ್ತಿ ವಿಜೇತ ಚಿತ್ರಗಳು ಹಾಗೂ ಭಾರತದ ಶ್ರೇಷ್ಠ ಪ್ರಾದೇಶಿಕ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಬೆಳಿಗ್ಗೆ 9 ರಿಂದ ಸಂಜೆ 6.30 ರವರೆಗೆ ಒಟ್ಟು ಏಳು ಸಿನಿಮಾಗಳನ್ನು ವೀಕ್ಷಿಸಲು ಅವಕಾಶವಿದೆ.

ಕೇವಲ ಸಿನಿಮಾ ಪ್ರದರ್ಶನಕ್ಕಷ್ಟೇ ಸೀಮಿತವಾಗದೆ, ಚಿತ್ರರಂಗದ ಕ್ಯಾಮೆರಾ ಹಿಂದಿನ ಕೆಲಸಗಳಲ್ಲಿ ಆಸಕ್ತಿಯಿರುವ ಯುವತಿಯರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್ ಎನ್. ಅವರು ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಚಿತ್ರಕಥೆ ಮತ್ತು ಸಂಭಾಷಣೆ ರಚನೆಯ ಬಗ್ಗೆ ತರಬೇತಿ ನೀಡಲಿದ್ದಾರೆ. ಸಿನಿಮಾ ರಂಗದ ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದು ಆರ್‌ಸಿಬಿ ಮಾಜಿ ಅಧ್ಯಕ್ಷೆ ರೋಟೆರಿಯನ್ ನಳಿನಿ ನಂಜುಂಡಯ್ಯ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಆಸಕ್ತರು www.rcb1934.in ಜಾಲತಾಣ ಅಥವಾ ಮೊಬೈಲ್ ಸಂಖ್ಯೆ 9845042179 ಅನ್ನು ಸಂಪರ್ಕಿಸಬಹುದಾಗಿದೆ.

Category
ಕರಾವಳಿ ತರಂಗಿಣಿ