ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧವಾಗಿರುವ ‘ಸೆಪ್ಟೆಂಬರ್ 21’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕೇವಲ 22 ವರ್ಷದ ಕರೆನ್ ಕ್ಷಿತಿ ಸುವರ್ಣ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ, ಅಲ್ಝೈಮರ್ಸ್ ಅಥವಾ ಮರೆಗುಳಿತನದಂತಹ ಗಂಭೀರ ವಿಷಯವನ್ನು ಅತ್ಯಂತ ಮೃದುವಾಗಿ ತೆರೆಯ ಮೇಲೆ ತಂದಿದೆ. ರೋಗಪೀಡಿತರ ತಳಮಳ ಮತ್ತು ಅವರ ಆರೈಕೆ ಮಾಡುವವರ ಭಾವನಾತ್ಮಕ ಹೋರಾಟವನ್ನು ಈ ಚಿತ್ರ ನೈಜವಾಗಿ ಚಿತ್ರಿಸಿದೆ.
ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಅತ್ಯಂತ ಸಂಯಮದ ಅಭಿನಯ ನೀಡಿದ್ದು, ಪ್ರವೀಣ್ ಸಿಂಗ್ ಸಿಸೋಡಿಯಾ ಮರೆಗುಳಿತನದಿಂದ ಬಳಲುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಜರೀನಾ ವಹಾಬ್, ಅಮಿತ್ ಬೆಹ್ಲ್ ಅವರಂತಹ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ. ಬಾಲಿವುಡ್‌ನ ಪ್ರೀತಿ ಅಲಿ ಅವರ ಹುಮಾರಾ ಮೂವಿ ಸೇರಿದಂತೆ ಹಲವು ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಈಗಾಗಲೇ 56ನೇ IFFI ಚಲನಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆದಿರುವ ಈ ಸಿನಿಮಾ, ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಮೇ 2026 ರಲ್ಲಿ ತೆರೆಕಾಣಲಿದೆ.