image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ಪಿಚ್ಚರ್' ಚಿತ್ರದ ಮೊದಲ ಹಾಡು ಬಿಡುಗಡೆ: ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್‌ನಲ್ಲಿ ಸದ್ದು ಮಾಡ್ತಿದೆ ಶಿಲ್ಪಾ ಗಣೇಶ್ ನಿರ್ಮಾಣದ ಸಿನಿಮಾ

'ಪಿಚ್ಚರ್' ಚಿತ್ರದ ಮೊದಲ ಹಾಡು ಬಿಡುಗಡೆ: ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್‌ನಲ್ಲಿ ಸದ್ದು ಮಾಡ್ತಿದೆ ಶಿಲ್ಪಾ ಗಣೇಶ್ ನಿರ್ಮಾಣದ ಸಿನಿಮಾ

ಬೆಂಗಳೂರು: ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳ ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ನಿರ್ಮಿಸಿರುವ, ಸಂದೀಪ ಬೆದ್ರ ನಿರ್ದೇಶನದ ಚೊಚ್ಚಲ ಚಿತ್ರ "ಪಿಚ್ಚರ್" ಈಗ ತನ್ನ ಮೊದಲ ಹಾಡಿನ ಮೂಲಕ ಹೊಸ ಸಂಚಲನ ಮೂಡಿಸಿದೆ. ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಈ ಚಿತ್ರದ ಮೊದಲ ಗೀತೆ ಆನಂದ್ ಆಡಿಯೋ ಮೂಲಕ ಲೋಕಾರ್ಪಣೆಗೊಂಡಿದ್ದು, ಬಿಡುಗಡೆಯಾದ ಕ್ಷಣದಿಂದಲೇ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡದಲ್ಲಿ ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದರೆ, ತುಳುವಿನಲ್ಲಿ 'ವಿಕ್ರಾಂತ್ ರೋಣ' ಖ್ಯಾತಿಯ ಅನೂಪ್ ಭಂಡಾರಿ ಸಾಹಿತ್ಯ ಒದಗಿಸಿದ್ದಾರೆ. ಸ್ಯಾಮುಯೆಲ್ ಅಭಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡು ಈಗಾಗಲೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರಿ ಸಂಖ್ಯೆಯ ವೀಕ್ಷಣೆ ಪಡೆಯುತ್ತಿದೆ. ಹದಿನೈದು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಅನುಭವ ಹೊಂದಿರುವ ಸಂದೀಪ ಬೆದ್ರ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದು, ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಮಂಗಳೂರು, ಬಂಟ್ವಾಳ ಹಾಗೂ ಕಾಶ್ಮೀರದ ಮನಮೋಹಕ ತಾಣಗಳಲ್ಲಿ ಚಿತ್ರೀಕರಣ ನಡೆಸಿರುವ "ಪಿಚ್ಚರ್", ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನಿತ್ಯಪ್ರಕಾಶ್ ಬಂಟ್ವಾಳ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದು, ಅವರಿಗೆ ನಾಯಕಿಯಾಗಿ ಅಮೃತ ಸುದು ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಕರಾವಳಿಯ ದಿಗ್ಗಜ ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಸಂತೋಷ್ ರೈ ಪಾತಾಜೆ ಮತ್ತು ಚಂದ್ರಶೇಖರ್ ಕೆ.ಎಸ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರವು ಪಕ್ಕಾ ಕೌಟುಂಬಿಕ ಕಾಮಿಡಿ ಎಂಟರ್ಟೈನರ್ ಆಗಿದ್ದು, ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮೋಹನ್ ಭಟ್ಕಳ್ ಕಾರ್ಯನಿರ್ವಹಿಸಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಉಳಿದ ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ ಎಂದು ಚಿತ್ರತಂಡ ತಿಳಿಸಿದೆ.

Category
ಕರಾವಳಿ ತರಂಗಿಣಿ