ಬೆಂಗಳೂರು: ಸಾಮಾನ್ಯವಾಗಿ ಸಣ್ಣ ಮಕ್ಕಳು ಹಠ ಮಾಡಿದಾಗ ಅಥವಾ ಊಟ ಮಾಡದಿದ್ದಾಗ ತಾಯಂದಿರು ಹೆದರಿಸಲು ಬಳಸುವ "ಗೊಗ್ಗಯ್ಯ ಬರುತ್ತಾನೆ" ಎಂಬ ಜನಪ್ರಿಯ ಪದವೇ ಈಗ ಸಿನಿಮಾದ ಶೀರ್ಷಿಕೆಯಾಗಿ ಬದಲಾಗಿದ್ದು, ಚಿತ್ರವು ಏಪ್ರಿಲ್ 10 ರಂದು ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ನಡೆದ ಚಿತ್ರದ ಹಾಡು ಬಿಡುಗಡೆ ಸಮಾರಂಭವು ಅದ್ದೂರಿಯಾಗಿ ನೆರವೇರಿದ್ದು, ಚಿತ್ರತಂಡವು ಸಿನಿಮಾದ ವಿಶೇಷತೆಗಳನ್ನು ಹಂಚಿಕೊಂಡಿದೆ.
ವಂದನ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಾ ಜೆ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ವಸಂತ್ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ವಸಂತ್, ಈ ಚಿತ್ರದ ಮೂಲಕ ನಾಯಕನಾಗಿ ಹಾಗೂ ಸಂಗೀತ ನಿರ್ದೇಶಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಅವರು, "ಕಾಮಿಡಿ, ಹಾರಾರ್ ಮತ್ತು ಸೆಂಟಿಮೆಂಟ್ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ರಾಮನವಮಿಯ ವಿಶೇಷವಾಗಿ ಹನುಮಂತನ ಕುರಿತಾದ 'ನೀ ಹೆದರದಿರು ಕಂದ' ಎಂಬ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಖ್ಯಾತ ಗಾಯಕ ಕೈಲಾಶ್ ಖೇರ್ ಅವರು ಹಾಡಿರುವ ಈ ಗೀತೆಯು ಈಗಾಗಲೇ ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ" ಎಂದರು.
ತಾಯಂದಿರು ಮಕ್ಕಳಿಗೆ ಹೇಳುವ ಆ ಶೀರ್ಷಿಕೆಯೇ ಚಿತ್ರಕ್ಕೆ ದೊಡ್ಡ ಬಲ ಎಂದು ನಿರ್ಮಾಪಕಿ ರಾಧಾ ತಿಳಿಸಿದರು. ಚಿತ್ರಕ್ಕೆ ತನ್ಮಯ್ ಎಸ್ ಆನಂದ್ ಕುಮಾರ್ ಅವರು ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಮಾಡುವುದರ ಜೊತೆಗೆ ನಿರ್ಮಾಣದ ಮೇಲ್ವಿಚಾರಣೆಯನ್ನೂ ಹೊತ್ತಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಕೌರವ ವೆಂಕಟೇಶ್, ವೈಭವ ನಾಗರಾಜ್ ಅವರಂತಹ ಅನುಭವಿ ಕಲಾವಿದರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಸ್ನೇಹ ಅವರು ಅಭಿನಯಿಸಿದ್ದು, ಸುರೇಶ್ ಚಿಕ್ಕಣ್ಣ ಹಾಗೂ ಚಿತ್ರತಂಡದ ಇತರ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು ಚಿತ್ರಕ್ಕೆ ಶುಭ ಹಾರೈಸಿದರು. ಏಪ್ರಿಲ್ 10 ರಂದು ಬಿಡುಗಡೆಯಾಗಲಿರುವ ಈ ಚಿತ್ರವು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.