image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದ ಸಿಂಪಲ್ ಸುನಿಯ‌ 'ಮೋಡ ಕವಿದ ವಾತಾವರಣ': ಜೂನ್ 26ಕ್ಕೆ ಅದ್ಧೂರಿ ಬಿಡುಗಡೆ

ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದ ಸಿಂಪಲ್ ಸುನಿಯ‌ 'ಮೋಡ ಕವಿದ ವಾತಾವರಣ': ಜೂನ್ 26ಕ್ಕೆ ಅದ್ಧೂರಿ ಬಿಡುಗಡೆ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ 'ಸಿಂಪಲ್' ಸುನಿ ಅವರು ತಮ್ಮ ವಿಭಿನ್ನ ಕಥಾಹಂದರದ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ತಮ್ಮ ಶಿಷ್ಯ ಶೀಲಮ್ ಅವರಿಗಾಗಿ ಸಿದ್ಧಪಡಿಸಿರುವ 'ಮೋಡ ಕವಿದ ವಾತಾವರಣ' ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಅಶ್ವಿನ್ ವಿನ್ಯಾಸಗೊಳಿಸಿರುವ ಆಕರ್ಷಕ ಪೋಸ್ಟರ್ ಮೂಲಕ ಚಿತ್ರತಂಡವು ಜೂನ್ 26ರಂದು ಸಿನಿಮಾ ತೆರೆಗೆ ಬರಲಿದೆ ಎಂಬ ಸುದ್ದಿಯನ್ನು ಹಂಚಿಕೊಂಡಿದೆ. ಸುನಿ ಅವರ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆ ಶೀಲಮ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

​ಈ ಸಿನಿಮಾವನ್ನು 'ಸೈಂಟಿಫಿಕ್ ಫಿಕ್ಷನ್ ಲವ್ ಸ್ಟೋರಿ' ಎಂಬ ವಿಶಿಷ್ಟ ಶೈಲಿಯಲ್ಲಿ ರೂಪಿಸಲಾಗಿದ್ದು, ಶೀಲಮ್ ಅವರಿಗೆ ಜೋಡಿಯಾಗಿ ಸಾತ್ವಿಕಾ ಮತ್ತು ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಈ ಹಿಂದೆ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಮಿಂಚಿದ್ದ ಶೀಲಮ್, ಈ ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 'ಒಂದು ಸರಳ ಪ್ರೇಮಕಥೆ'ಯಂತಹ ಯಶಸ್ವಿ ಚಿತ್ರವನ್ನು ನೀಡಿದ್ದ ರಾಮ್ ಮೂವೀಸ್ ಸಂಸ್ಥೆಯ ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ತಾಂತ್ರಿಕವಾಗಿಯೂ ಸಿನಿಮಾ ಅತ್ಯಂತ ಬಲಿಷ್ಠವಾಗಿದ್ದು, ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಹಾಗೂ ಆದಿತ್ಯ ಕಶ್ಯಪ್ ಅವರ ಸಂಕಲನ ಚಿತ್ರಕ್ಕಿದೆ.

​ಸಂಗೀತ ಕ್ಷೇತ್ರದಲ್ಲಿ ಈಗಾಗಲೇ 'ಮೋಡ ಕವಿದ ವಾತಾವರಣ' ಸಂಚಲನ ಮೂಡಿಸಿದೆ. ಜೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ, ಸಂಜಿತ್ ಹೆಗಡೆ ಧ್ವನಿಯಾಗಿರುವ 'ನನ್ನೆದೆಯ ಹಾಡೊಂದನು' ಹಾಡು ಈಗಾಗಲೇ ಕೇಳುಗರ ಮನಗೆದ್ದಿದೆ. ಚಿತ್ರದ ಹಾಡುಗಳ ಗುಣಮಟ್ಟವನ್ನು ಗುರುತಿಸಿರುವ ಸರೆಗಮ ಸಂಸ್ಥೆಯು ಭಾರಿ ಮೊತ್ತಕ್ಕೆ ಆಡಿಯೋ ಹಕ್ಕನ್ನು ತನ್ನದಾಗಿಸಿಕೊಂಡಿದೆ. ವಿಭಿನ್ನ ಟೈಟಲ್ ಮತ್ತು ಕುತೂಹಲಕಾರಿ ಕಥಾಹಂದರ ಹೊಂದಿರುವ ಈ ಸಿನಿಮಾ ಜೂನ್ ತಿಂಗಳ ಅಂತ್ಯದಲ್ಲಿ ಸಿನಿರಸಿಕರಿಗೆ ಹೊಸ ಅನುಭವ ನೀಡಲು ಸಜ್ಜಾಗಿದೆ.

Category
ಕರಾವಳಿ ತರಂಗಿಣಿ