ಸ್ಯಾಂಡಲ್‌ವುಡ್‌ನ ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ‘ರಾಮರಸ’ ಚಿತ್ರದ ವಿಶೇಷ ಕ್ಯಾರೆಕ್ಟರ್ ಟೀಸರ್ ಇತ್ತೀಚೆಗೆ ರಾಮನವಮಿಯ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಪ್ರಜ್ವಲ್ ಅವರು ‘ಗುರು ಸಿದ್ದ’ ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವಧೂತ ಶ್ರೀ ವಿನಯ್ ಗುರೂಜಿ ಅವರು ಈ ಪಾತ್ರದ ಟೀಸರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಕರ್ನಾಟಕದ ಅಲೆಮಾರಿ ಪರಂಪರೆಯಾದ 'ಸುಡುಗಾಡು ಸಿದ್ಧ' ಸಮುದಾಯದ ಹಿನ್ನೆಲೆಯನ್ನು ಈ ಪಾತ್ರ ಹೊಂದಿದೆ. ಹಳ್ಳಿಹಳ್ಳಿಗೆ ಸಂಚರಿಸುತ್ತಾ ಭವಿಷ್ಯ ನುಡಿಯುವ ಹಾಗೂ ಅಪರೂಪದ ಗಿಡಮೂಲಿಕೆಗಳ ಮೂಲಕ ಚಿಕಿತ್ಸೆ ನೀಡುವ ಪವಾಡ ಪುರುಷನ ರೂಪದಲ್ಲಿ ಪ್ರಜ್ವಲ್ ಮಿಂಚಲಿದ್ದಾರೆ. ನಿರ್ಮಾಪಕ ಗುರು ದೇಶಪಾಂಡೆ ಮಾತನಾಡಿ, " ‘ಜಂಟಲ್ ಮ್ಯಾನ್’ ನಂತರ ಪ್ರಜ್ವಲ್ ನಮ್ಮ ಸಂಸ್ಥೆಯ ಚಿತ್ರದಲ್ಲಿ ನಟಿಸುತ್ತಿರುವುದು ಹೆಮ್ಮೆಯ ವಿಷಯ. ಈ ಸಿನಿಮಾದ ಕೊನೆಯ 20 ನಿಮಿಷಗಳ ಕ್ಲೈಮ್ಯಾಕ್ಸ್ ಅದ್ಭುತವಾಗಿ ಮೂಡಿಬಂದಿದ್ದು, ಪ್ರೇಕ್ಷಕರು ಭಕ್ತಿಯಿಂದ ಚಪ್ಪಲಿ ಬಿಟ್ಟು ನೋಡುವಂತಹ ಅನುಭವ ನೀಡಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ಇದೊಂದು ದೊಡ್ಡ ಬಜೆಟ್ ಸಿನಿಮಾವಾಗಿದ್ದು, ಚಿತ್ರದ ವಿ.ಎಫ್.ಎಕ್ಸ್ ಕೆಲಸಗಳು ಅತ್ಯುತ್ತಮವಾಗಿವೆ ಎಂದು ತಿಳಿಸಿದರು. ಇದೇ ವೇಳೆ ‘ಜಂಟಲ್ ಮ್ಯಾನ್’ ಚಿತ್ರದ ರಾಜ್ಯ ಪ್ರಶಸ್ತಿಗಾಗಿ ಪ್ರಜ್ವಲ್ ಅವರನ್ನು ಸನ್ಮಾನಿಸಲಾಯಿತು. ಚಿತ್ರದ ಮತ್ತೋರ್ವ ನಾಯಕ ಕಾರ್ತಿಕ್ ಮಹೇಶ್ ಅವರಿಗೆ ‘ರೈಸಿಂಗ್ ಸ್ಟಾರ್’ ಬಿರುದು ನೀಡಿ ಗೌರವಿಸಲಾಯಿತು.
ಬಿ.ಎಂ.ಗಿರಿರಾಜ್ ನಿರ್ದೇಶನದ ಈ ಚಿತ್ರಕ್ಕೆ ಕೆ.ಕೃಷ್ಣಕುಮಾರ್ ಛಾಯಾಗ್ರಹಣವಿದ್ದು, ಯಮುನಾ ಶ್ರೀನಿಧಿ, ನಾಗೇಂದ್ರ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.