ಪ್ರಕೃತಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶರಣಪ್ಪ ಗೌರಮ್ಮ ಅವರು ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ 'ಯಾವ ಮೋಹನ ಮುರಳಿ ಕರೆಯಿತು' ಸಿನಿಮಾ ಇದೇ ಮಾರ್ಚ್ 27ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಭಾವನಾತ್ಮಕ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
ವೃತ್ತಿಯಲ್ಲಿ ವಕೀಲರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ನಿರ್ಮಾಪಕ ಶರಣಪ್ಪ ಅವರು ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪದಕ ವಿಜೇತರೂ ಹೌದು. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, "ನನ್ನ ಮಗಳಿಗಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದೇನೆ. ಕಥೆ ತುಂಬಾ ಹೃದಯಸ್ಪರ್ಶಿಯಾಗಿದೆ. ಚಿತ್ರೀಕರಣ ಮುಗಿಯುವ 10 ದಿನಗಳ ಮುನ್ನ ಚಿತ್ರದಲ್ಲಿ ನಟಿಸಿದ್ದ 'ರಾಕಿ' ಎಂಬ ನಾಯಿ ಅಪಘಾತದಲ್ಲಿ ಮೃತಪಟ್ಟಿದ್ದು ನಮಗೆ ತುಂಬಲಾರದ ನಷ್ಟವಾಯಿತು. ನಂತರ 'ರಾಣಾ' ಎಂಬ ನಾಯಿ ಮರಿಯನ್ನು ತಂದು, ಅದು ಬೆಳೆಯುವವರೆಗೂ ಕಾಯ್ದು ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿದ್ದರಿಂದ ಸಿನಿಮಾ ಬಿಡುಗಡೆ ಕೊಂಚ ತಡವಾಯಿತು. ಇದು ಶ್ವಾನ ಪ್ರೇಮಿಗಳಿಗೆ ಹಾಗೂ ಕುಟುಂಬ ಸಮೇತ ನೋಡುವ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ದೇಶಕ ವಿಶ್ವಾಸ್ ಕೃಷ್ಣ ಅವರಿಗೆ ಇದು ಮೊದಲ ಸಿನಿಮಾ. ಈ ಚಿತ್ರದಲ್ಲಿ ಸುಂದರವಾದ ಎಮೋಷನಲ್ ಜರ್ನಿ ಇದ್ದು, ಪೆಟ್ ಲವರ್ಸ್‌ಗೆ ಸಿನಿಮಾ ಹತ್ತಿರವಾಗಲಿದೆ ಎಂದು ಅವರು ತಿಳಿಸಿದರು. ಚಿತ್ರದ ಪ್ರಮುಖ ಪಾತ್ರದಲ್ಲಿ ನಿರ್ಮಾಪಕರ ಪುತ್ರಿ, ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಪದಕ ವಿಜೇತೆ ಕುಮಾರಿ ಪ್ರಕೃತಿ ನಟಿಸಿದ್ದಾರೆ. ಉಳಿದಂತೆ ಮಾಧವ, ಸ್ವಪ್ನ ಶೆಟ್ಟಿಗಾರ ಹಾಗೂ ಪಟೇಲ್ ವರುಣ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನಿಲ ಸಿ.ಜೆ ಅವರ ಸಂಗೀತ ಹಾಗೂ ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ವಿಶೇಷವೆಂದರೆ, ಚಿತ್ರದಲ್ಲಿ ಅಭಿನಯಿಸಿರುವ 'ರಾಣಾ' ಎಂಬ ಶ್ವಾನವೇ ಟ್ರೇಲರ್ ಬಿಡುಗಡೆ ಮಾಡಿರುವುದು ಕಾರ್ಯಕ್ರಮದ ಹೈಲೈಟ್ ಆಗಿತ್ತು.