ನ್ಯೂಯಾರ್ಕ್ : ಸಿನಿಮಾ ಕ್ಷೇತ್ರದಲ್ಲಿ ನೀಡಲಾಗುವ ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್. ಈ ಪ್ರಶಸ್ತಿ ಪಡೆಯಬೇಕು ಅನ್ನೋದು ಜಗತ್ತಿನ ಪ್ರತಿಯೊಬ್ಬ ಫಿಲ್ಮ್ ಮೇಕರ್‌ನ ಕನಸು. ಅದಕ್ಕೆ ಪ್ರತಿ ವರ್ಷ ವಿಶ್ವದ ಮೂಲೆ ಮೂಲೆಯಲ್ಲಿರುವ ಸಿನಿಮಾ ಮಂದಿ ಪ್ರಯತ್ನ ಪಡುತ್ತಲೇ ಇರುತ್ತಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಅದ್ಧೂರಿಯಾಗಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದೆ. ವಿಶ್ವದ ಅತ್ಯುನ್ನತ ಸಿನಿಮಾಗಳು ಪ್ರಶಸ್ತಿಯನ್ನು ಗೆದ್ದಿವೆ. ಅಕಾಡೆಮಿ ಅವಾರ್ಡ್ ಅಂತಲೂ ಕರೆಯುವ ಆಸ್ಕರ್ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಇರಾನ್-ಇಸ್ರೇಲ್-ಅಮೆರಿಕ ಯುದ್ಧದ ಭೀತಿಯ ಹೊರತಾಗಿಯೂ ಯಶಸ್ವಿಯಾಗಿ ನಡೆದಿದೆ. ಇದು ಕೇವಲ ಪ್ರಶಸ್ತಿ ಸಮಾರಂಭ ಅಷ್ಟೇ ಅಲ್ಲ. ಸೆಲೆಬ್ರೆಟಿಗಳ ಫ್ಯಾಷನ್, ಭಾವನಾತ್ಮಕ ಭಾಷಣ ಹಾಗೂ ಆಸ್ಕರ್ ಗೆದ್ದ ಸಿನಿಮಾ ತಂಡಗಳು ಹೈಲೈಟ್ ಆಗಿವೆ. ಅಷ್ಟೇ ಅಲ್ಲದೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಸೆಲೆಬ್ರೆಟಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಬಾರಿ ಭಾರತೀಯರಿಗೆ ಆಸ್ಕರ್ ಪ್ರಶಸ್ತಿ ನಿರಾಸೆ ಮೂಡಿಸಿದೆ. ಅದಕ್ಕೆ ಕಾರಣ ಭಾರತದ ಒಂದೇ ಒಂದು ಸಿನಿಮಾ ನಾಮಿನೇಟ್ ಆಗಿಲ್ಲ. ಹೀಗಾಗಿ ಈ ವರ್ಷ ಭಾರತೀಯ ಫಿಲ್ಮ್ ಮೇಕರ್ಸ್‌ಗೆ ಬೇಸರ ಮೂಡಿಸಿದೆ.
ಈಗಾಗಲೇ ನಾಮಿನೇಟ್ ಆಗಿರುವ ಸಿನಿಮಾಗಳ ಪೈಕಿ 'ಸಿನ್ನೆರ್ಸ್' 16 ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಹಾಗೇ ಟೈಟಾನಿಕ್ ಹೀರೋ ಲಿಯನಾರ್ಡೋ ಡಿಕ್ಯಾಪ್ರಿಯೋ ನಟಿಸಿದ 'ಒನ್ ಬ್ಯಾಟಲ್ ಆಫ್ಟರ್ ಎನದರ್' ಪ್ರಶಸ್ತಿಯನ್ನು ಪಡೆದುಕೊಂಡಿದೆ. 'ಒನ್ ಬ್ಯಾಟಲ್ ಆಫ್ಟರ್ ಅನದರ್' ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ನಿರ್ದೇಶಕ (ಪಾಲ್ ಥಾಮಸ್ ಆಂಡರ್ಸನ್), ಅತ್ಯುತ್ತಮ ಪೋಷಕ ನಟ (ಸೀನ್ ಪೆನ್), ಅತ್ಯುತ್ತಮ ಚಲನಚಿತ್ರ ಸಂಕಲನ, ಅತ್ಯುತ್ತಮ ಚಿತ್ರಕಥೆ ಹಾಗೂ ಅತ್ಯುತ್ತಮ ಕಾಸ್ಟಿಂಗ್ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. 'ಸಿನ್ನರ್ಸ್' ಚಿತ್ರಕ್ಕೆ ಅತ್ಯುತ್ತಮ ನಟ(ಮೈಕೆಲ್ ಬಿ ಜೋರ್ಡಾನ್), ಅತ್ಯುತ್ತಮ ಮೂಲ ಚಿತ್ರಕಥೆ (ರಿಯಾನ್ ಕೂಗ್ಲರ್), ಅತ್ಯುತ್ತಮ ಛಾಯಾಗ್ರಹಣ ಹಾಗೂ ಅತ್ಯುತ್ತಮ ಮೂಲ ಸಂಗೀತ ವಿಭಾಗಗಳಲ್ಲಿ ಪ್ರಶಸ್ತಿಗಳು ಲಭಿಸಿವೆ.