ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿ, ‘ಲೇಡಿ ಸೂಪರ್ ಸ್ಟಾರ್’ ಎಂದೇ ಕರೆಯಲ್ಪಡುವ ಅನುಷ್ಕಾ ಶೆಟ್ಟಿ ಅವರ ವಿವಾಹದ ಕುರಿತಾದ ಸುದ್ದಿ ಈಗ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ ಹಲವು ವರ್ಷಗಳಿಂದ ಅನುಷ್ಕಾ ಅವರ ಮದುವೆಯ ಬಗ್ಗೆ ಹತ್ತಾರು ವದಂತಿಗಳು ಹರಿದಾಡಿದ್ದರೂ, ಈ ಬಾರಿ ಕೇಳಿಬರುತ್ತಿರುವ ಸುದ್ದಿ ಮಾತ್ರ ಬಹಳ ಗಟ್ಟಿಯಾಗಿದೆ. ಮೂಲಗಳ ಪ್ರಕಾರ, ಮಂಗಳೂರು ಮೂಲದವರಾದ ಅನುಷ್ಕಾ ಶೆಟ್ಟಿ ಅವರು ಶೀಘ್ರದಲ್ಲೇ ಬೆಂಗಳೂರಿನ ಪ್ರತಿಷ್ಠಿತ ಉದ್ಯಮಿಯೊಬ್ಬರ ಜೊತೆ ವಿವಾಹವಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಅನುಷ್ಕಾ ಅವರ ಹೆಸರು ಪ್ರಭಾಸ್ ಸೇರಿದಂತೆ ಹಲವು ನಟರ ಜೊತೆ ತಳುಕು ಹಾಕಿಕೊಂಡಿತ್ತಾದರೂ, ಈ ಬಾರಿ ಹಸೆಮಣೆ ಏರಲಿರುವ ವರ ಚಿತ್ರರಂಗಕ್ಕೆ ಸಂಬಂಧಿಸದ ವ್ಯಕ್ತಿ ಎನ್ನಲಾಗಿದೆ. ಕುಟುಂಬದವರು ನಿಶ್ಚಯಿಸಿರುವ ಈ ಸಂಬಂಧದಲ್ಲಿ ಬೆಂಗಳೂರಿನ ಖ್ಯಾತ ಉದ್ಯಮಿಯೊಬ್ಬರು ಅನುಷ್ಕಾ ಅವರ ಕೈಹಿಡಿಯಲಿದ್ದಾರೆ ಎಂದು ವರದಿಯಾಗಿದೆ. ಈ ವರನು ಅನುಷ್ಕಾ ಕುಟುಂಬಕ್ಕೆ ಮೊದಲೇ ಪರಿಚಿತರಾಗಿದ್ದು, ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಈ ಮದುವೆ ನಿಶ್ಚಯವಾಗಿದೆ ಎಂದು ಹೇಳಲಾಗುತ್ತಿದೆ.
ಸದ್ಯ 44 ವರ್ಷದ ಅನುಷ್ಕಾ ಶೆಟ್ಟಿ ಅವರು ಸಿನಿಮಾಗಳ ಆಯ್ಕೆಯಲ್ಲಿ ಬಹಳ ಚ್ಯೂಸಿ ಆಗಿದ್ದು, ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದು ಅವರ ಮದುವೆಯ ಸಿದ್ಧತೆಯ ಭಾಗವೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಬಾಹುಬಲಿ ಚಿತ್ರದ ‘ದೇವಸೇನಾ’ ಪಾತ್ರದ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿರುವ ಅನುಷ್ಕಾ, ಮದುವೆಯ ನಂತರ ಬೆಂಗಳೂರಿನಲ್ಲೇ ನೆಲೆಸಲಿದ್ದಾರೆಯೇ ಎಂಬ ಕುತೂಹಲ ಕನ್ನಡಿಗರಲ್ಲಿದೆ. ಈ ಬಗ್ಗೆ ನಟಿ ಅಥವಾ ಅವರ ಕುಟುಂಬದ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ಅನುಷ್ಕಾ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾವಾಗಲೂ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಕಾರಣ, ಈ ಸುದ್ದಿಯ ಸತ್ಯಾಸತ್ಯತೆ ಅಧಿಕೃತ ಘೋಷಣೆಯಾದ ನಂತರವೇ ತಿಳಿಯಬೇಕಿದೆ. ಸದ್ಯಕ್ಕೆ ಅನುಷ್ಕಾ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಕಂಕಣ ಭಾಗ್ಯ ಕೂಡಿಬರಲಿ ಎಂದು ಶುಭ ಹಾರೈಸುತ್ತಿದ್ದಾರೆ.