ಚಿತ್ರಮಂದಿರಗಳಲ್ಲಿ ಎಲ್ಲರ ಮನೆ ಮಾತಾಗಿದ್ದ ಆಕ್ಷನ್ ಡ್ರಾಮಾ "ಲ್ಯಾಂಡ್ ಲಾರ್ಡ್" ಇದೇ ಮಾರ್ಚ್ 19ಕ್ಕೆ Zee5ನಲ್ಲಿ ಬಿಡುಗಡೆ ಆಗುವ ಮೂಲಕ ಈ ವರ್ಷದ ಯುಗಾದಿ ಹಬ್ಬಕ್ಕೆ ವಿಶೇಷ ಮೆರುಗು ನೀಡಲು ಸಜ್ಜಾಗಿದೆ. ಜಡೇಶ್ ಕೆ ಹಂಪಿ ನಿರ್ದೇಶನದ ಈ ಚಿತ್ರವು 1980ರ ದಶಕದ ಗ್ರಾಮೀಣ ಕರ್ನಾಟಕದ ಹಿನ್ನೆಲೆಯನ್ನು ಹೊಂದಿದ್ದು, ಸಾರಥಿ ಫಿಲಂಸ್ ಲಾಂಛನದಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿದೆ.
ಈ ಚಿತ್ರದಲ್ಲಿ ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ, ರಿಥನ್ಯಾ ವಿಜಯ್, ಉಮಾಶ್ರೀ, ಭಾವನಾ ರಾವ್ ಹಾಗೂ ಸಂಪತ್ ಮೈತ್ರೇಯ ಸೇರಿದಂತೆ ಒಂದು ದೊಡ್ಡ ತಾರಾಗಣವೇ ಇದೆ. ಚಿತ್ರದಲ್ಲಿ ರಾಚಯ್ಯ ಎಂಬ ಅಂತರ್ಮುಖಿ ಪಾತ್ರವನ್ನು ನಿರ್ವಹಿಸಿರುವ ನಟ ದುನಿಯಾ ವಿಜಯ್, ಮಾತಿಗಿಂತ ಭಾವನೆಗಳ ಮೂಲಕ ವ್ಯಕ್ತವಾಗುವ ಈ ಪಾತ್ರ ತಮಗೊಂದು ದೊಡ್ಡ ಸವಾಲಾಗಿತ್ತು ಎಂದು ಹಂಚಿಕೊಂಡಿದ್ದಾರೆ. ನಟಿ ರಚಿತಾ ರಾಮ್ ಅವರು ಈ ಚಿತ್ರವು ಸರಳವಾಗಿದ್ದರೂ, ಕಥೆಯಲ್ಲಿರುವ ಭಾವನೆಗಳು ಬಹಳ ಆಳವಾಗಿದ್ದು ಪ್ರೇಕ್ಷಕರಿಗೆ ಹತ್ತಿರವಾಗಲಿದೆ ಎಂದು ತಿಳಿಸಿದ್ದಾರೆ.
ಭಾರತದ ಪ್ರಮುಖ ಡಿಜಿಟಲ್ ವೇದಿಕೆಯಾದ Zee5 (ಜೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್), ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದು, ಈಗ 'ಲ್ಯಾಂಡ್ ಲಾರ್ಡ್' ಚಿತ್ರದ ಮೂಲಕ ಓಟಿಟಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.