ಹೈದರಾಬಾದ್: ಟಾಲಿವುಡ್‌ನ ಸೌಮ್ಯ ಸ್ವಭಾವದ ನಟ ಅಕ್ಕಿನೇನಿ ನಾಗ ಚೈತನ್ಯ ಇದೀಗ ತಮ್ಮ 'ಲವರ್ ಬಾಯ್' ಇಮೇಜ್ ಕೊಡವಿಕೊಂಡು ರಗಡ್ ಅವತಾರಕ್ಕೆ ಸಜ್ಜಾಗಿದ್ದಾರೆ. ತಮ್ಮ ಮುಂಬರುವ ಬಹುನಿರೀಕ್ಷಿತ ಪೌರಾಣಿಕ ಥ್ರಿಲ್ಲರ್ ‘ವೃಷಕರ್ಮ’ ಚಿತ್ರಕ್ಕಾಗಿ ಅವರು ಮಾಡಿಕೊಂಡಿರುವ ದೈಹಿಕ ಬದಲಾವಣೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಬೆರಗುಗೊಳಿಸಿವೆ. ಈ ಚಿತ್ರದಲ್ಲಿ ಅವರು ನಿಧಿ ಶೋಧಕನ (Treasure Hunter) ಸಾಹಸಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪಾತ್ರದ ಬೇಡಿಕೆಗೆ ತಕ್ಕಂತೆ ಮಸಲ್ ಬೆಳೆಸಿ, ದಪ್ಪ ಗಡ್ಡ ಹಾಗೂ ವಿಭಿನ್ನ ಹೇರ್ ಸ್ಟೈಲ್ ಮೂಲಕ ಸಂಪೂರ್ಣವಾಗಿ ಬದಲಾಗಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ವರ್ಕ್‌ಔಟ್ ಫೋಟೋ ಹಂಚಿಕೊಂಡಿರುವ ಚೈತನ್ಯ, ಕೈಯಲ್ಲಿ ಡಂಬ್ಬೆಲ್ಸ್ ಹಿಡಿದು ಸಿಕ್ಸ್ ಪ್ಯಾಕ್ ಪ್ರದರ್ಶಿಸುವ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದಾರೆ.
ಈ ಬದಲಾವಣೆಯ ಕುರಿತು ಮಾತನಾಡಿರುವ ನಾಗ ಚೈತನ್ಯ, "ಚಿತ್ರದ ಪಾತ್ರಕ್ಕೆ ಅಥ್ಲೆಟಿಕ್ ಬಾಡಿ ಅಗತ್ಯವಿದ್ದ ಕಾರಣ ಸ್ಟ್ರೆಂತ್ ಟ್ರೇನಿಂಗ್, ಈಜು ಮತ್ತು ಯೋಗದಂತಹ ಕಠಿಣ ವ್ಯಾಯಾಮಗಳನ್ನು ಮಾಡಿದ್ದೇನೆ. ವಿಶೇಷವಾಗಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಕಟ್ಟುನಿಟ್ಟಾದ ಆಹಾರ ಕ್ರಮ ಪಾಲಿಸಿದ್ದೇನೆ" ಎಂದು ಶ್ರಮದ ಹಾದಿಯನ್ನು ಹಂಚಿಕೊಂಡಿದ್ದಾರೆ. ‘ವಿರೂಪಾಕ್ಷ’ ಖ್ಯಾತಿಯ ಕಾರ್ತಿಕ್ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾದಲ್ಲಿ ಮೀನಾಕ್ಷಿ ಚೌಧರಿ ನಾಯಕಿಯಾಗಿದ್ದು, ಜಯರಾಮ್, ಸತ್ಯ ಅಕ್ಕಲ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವು ಮಾರ್ಚ್ 20ರಂದು ಅದ್ದೂರಿಯಾಗಿ ತೆರೆಕಾಣಲಿದ್ದು, ಚೈತನ್ಯ ಅವರ ಈ ಹೊಸ ಸಾಹಸವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.