ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣ್ವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ‘ಧುರಂಧರ್ 2’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಪ್ರೇಕ್ಷಕರನ್ನು ಸಜ್ಜುಗೊಳಿಸಲು ಚಿತ್ರದ ಮೊದಲ ಭಾಗ ‘ಧುರಂಧರ್’ ಅನ್ನು ಮಾರ್ಚ್ 12 ರಂದು ಅದ್ಧೂರಿಯಾಗಿ ಮರು ಬಿಡುಗಡೆ ಮಾಡಲಾಗಿದೆ. 2025ರ ಡಿಸೆಂಬರ್‌ನಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ಈ ಸಿನಿಮಾ, ಇದೀಗ ಎರಡನೇ ಭಾಗದ ಬಿಡುಗಡೆಗೂ ಮುನ್ನವೇ ಸುಮಾರು 250 ಪರದೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ವಿಶೇಷವಾಗಿ ವಿದೇಶಗಳಲ್ಲಿಯೂ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಸಿರುವ ಈ ಚಿತ್ರ, ಉತ್ತರ ಅಮೆರಿಕವೊಂದರಲ್ಲೇ 185 ಸ್ಕ್ರೀನ್‌ಗಳು ಸೇರಿದಂತೆ ವಿಶ್ವದಾದ್ಯಂತ ಒಟ್ಟು 500ಕ್ಕೂ ಹೆಚ್ಚು ಪರದೆಗಳಲ್ಲಿ ಮರು ಬಿಡುಗಡೆ ಆಗುವ ಮೂಲಕ ಹೊಸ ದಾಖಲೆ ಬರೆದಿದೆ.
ಈ ಹಿಂದೆ ‘ಬಾಹುಬಲಿ’, ‘ಕೆಜಿಎಫ್’ ಹಾಗೂ ‘ಪುಷ್ಪ’ ಸಿನಿಮಾಗಳ ಎರಡನೇ ಭಾಗದ ಬಿಡುಗಡೆಗೆ ಮುನ್ನ ಮೊದಲ ಭಾಗವನ್ನು ರಿ-ರಿಲೀಸ್ ಮಾಡುವ ಸಂಪ್ರದಾಯವಿತ್ತು, ಈಗ ಅದೇ ಹಾದಿಯಲ್ಲಿ ‘ಧುರಂಧರ್’ ಚಿತ್ರತಂಡ ಸಾಗಿದೆ. ಮಾರ್ಚ್ 19ರಂದು ಬಿಡುಗಡೆಯಾಗಲಿರುವ ‘ಧುರಂಧರ್ 2: ದಿ ರಿವೆಂಜ್’ ಸಿನಿಮಾದ ಕತೆಯನ್ನು ಪ್ರೇಕ್ಷಕರು ಸ್ಮರಿಸಿಕೊಳ್ಳಲು ಈ ಮರು ಬಿಡುಗಡೆ ಪೂರಕವಾಗಿದೆ. ಮಾರ್ಚ್ 18ರಿಂದಲೇ ಸಿನಿಮಾದ ಪ್ರೀಮಿಯರ್ ಶೋಗಳು ಆರಂಭವಾಗಲಿದ್ದು, ಸದ್ಯ ಮೊದಲ ಭಾಗದ ರೋಮಾಂಚನಕಾರಿ ಕ್ಷಣಗಳನ್ನು ಬೆಳ್ಳಿತೆರೆಯ ಮೇಲೆ ಮತ್ತೊಮ್ಮೆ ಸವಿಯಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.