ಹೈದರಾಬಾದ್ :ಬಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಜೊತೆಗೆ ಈಗ ಉದ್ಯಮ ರಂಗಕ್ಕೂ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದು, ಹೈದರಾಬಾದ್‌ನಲ್ಲಿ ತಮ್ಮದೇ ಆದ ‘ಅಲ್ಲು ಸಿನಿಮಾಸ್’ ಮಲ್ಟಿಪ್ಲೆಕ್ಸ್ ಅನ್ನು ಅದ್ಧೂರಿಯಾಗಿ ಪ್ರಾರಂಭಿಸಿದ್ದಾರೆ. ಗುರುವಾರ (ಮಾರ್ಚ್ 12) ನಡೆದ ಈ ಸಮಾರಂಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮಲ್ಟಿಪ್ಲೆಕ್ಸ್ ಅನ್ನು ಉದ್ಘಾಟಿಸಿ, ಅಲ್ಲು ಅರ್ಜುನ್ ಅವರ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, "ತೆಲುಗು ಚಿತ್ರರಂಗದ ಪ್ರತಿಭೆ ಕೇವಲ ಪ್ಯಾನ್ ಇಂಡಿಯಾ ಮಟ್ಟಕ್ಕೆ ಸೀಮಿತವಾಗಬಾರದು. ಅಲ್ಲು ಅರ್ಜುನ್ ಅವರು ಮುಂದಿನ ದಿನಗಳಲ್ಲಿ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಲ್ಲಿಯೂ ಮಿಂಚಬೇಕು. ನಮ್ಮ ಸ್ಪರ್ಧೆ ಬಾಲಿವುಡ್ ಅಥವಾ ಇತರ ರಾಜ್ಯಗಳ ಸಿನಿಮಾಗಳ ಜೊತೆಗಲ್ಲ, ಬದಲಾಗಿ ಹಾಲಿವುಡ್‌ಗೆ ಪೈಪೋಟಿ ನೀಡುವತ್ತ ನಾವೆಲ್ಲರೂ ಗಮನ ಹರಿಸಬೇಕು" ಎಂದು ಆಶಯ ವ್ಯಕ್ತಪಡಿಸಿದರು. ಕಲೆಕ್ಷನ್ ವಿಚಾರದಲ್ಲಿ ಬಾಲಿವುಡ್ ಮೀರಿಸುತ್ತಿರುವ ನಾವು, ಗುಣಮಟ್ಟದಲ್ಲಿ ವಿಶ್ವಮಟ್ಟ ತಲುಪಬೇಕೆಂದು ಅವರು ಕರೆ ನೀಡಿದರು. ಈಗಾಗಲೇ ಮಹೇಶ್ ಬಾಬು ಮತ್ತು ವಿಜಯ್ ದೇವರಕೊಂಡ ಅಂತಹ ಸ್ಟಾರ್ ನಟರು ಮಲ್ಟಿಪ್ಲೆಕ್ಸ್ ಉದ್ಯಮದಲ್ಲಿದ್ದು, ಈಗ ಅಲ್ಲು ಅರ್ಜುನ್ ಕೂಡ ಆ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಈ ಸುಸಜ್ಜಿತ ಮಲ್ಟಿಪ್ಲೆಕ್ಸ್ ಸಿನಿಮಾ ಪ್ರಿಯರಿಗೆ ಹೊಸ ಅನುಭವ ನೀಡಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.