ಬೆಂಗಳೂರು : ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕನ್ನಡ ಬ್ಲಾಕ್‌ಬಸ್ಟರ್ ಸಿನಿಮಾ ‘ಕಾಂತಾರ ಚಾಪ್ಟರ್ 1’ ರ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಜೀ ಕನ್ನಡ ವಾಹಿನಿಯಲ್ಲಿ ಅತ್ಯುತ್ತಮ ಟಿಆರ್‌ಪಿ ರೇಟಿಂಗ್ ಗಳಿಸಿದೆ. ಈ ಮೂಲಕ ಕರ್ನಾಟಕದ ಕಿರುತೆರೆ ಪ್ರೇಕ್ಷಕರಲ್ಲಿ ಈ ಚಿತ್ರಕ್ಕಿರುವ ಜನಪ್ರಿಯತೆ ಮತ್ತು ಸಾಂಸ್ಕೃತಿಕ ಬಾಂಧವ್ಯ ಮತ್ತೊಮ್ಮೆ ದೃಢಪಟ್ಟಿದೆ. 24 ಜನವರಿ 2026, ಸಂಜೆ 7:00 ಗಂಟೆಗೆ ಚಿತ್ರದ ಮೊದಲ ಟಿವಿ ಪ್ರಿಮಿಯರ್ ಪ್ರದರ್ಶನವಾಗಲಿದೆ.
ಈ ಪ್ರೀಮಿಯರ್ ಒಟ್ಟಾರೆ (ನಗರ + ಗ್ರಾಮೀಣ) 11.56 TVR ಮತ್ತು ನಗರ ಪ್ರದೇಶದಲ್ಲಿ 9.30 TVR ದಾಖಲಿಸಿದೆ. ಇದು ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿದೆ. ಅಕ್ಟೋಬರ್ 2, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಕಂಡು, ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತ್ತು. ರಿಷಬ್ ಶೆಟ್ಟಿ ಅವರ ಲೇಖನ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ವಿಜಯ್ ಕಿರಗಂದೂರು ಅವರು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಎಸ್. ಕಶ್ಯಪ್ ಅವರ ಛಾಯಾಗ್ರಹಣ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
ವ್ಯಾಪಾರ ವಿಶ್ಲೇಷಕರ ಪ್ರಕಾರ, ಪ್ರೈಮ್-ಟೈಮ್‌ನಲ್ಲಿ ಕನ್ನಡ ಸಿನಿಮಾವೊಂದರ ಟೆಲಿವಿಷನ್ ಪ್ರೀಮಿಯರ್ ಈ ಮಟ್ಟದ ರೇಟಿಂಗ್ ಪಡೆಯುವುದು ಅಪರೂಪ. ಇದು 'ಕಾಂತಾರ ಚಾಪ್ಟರ್ 1' ರ ಸಾಂಸ್ಕೃತಿಕ ಪ್ರಭಾವ ಮತ್ತು ವಾಣಿಜ್ಯ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಚಿತ್ರದ ಬಲಿಷ್ಠ ಕಥಾಹಂದರವು ಕುಟುಂಬ ಸಮೇತ ವೀಕ್ಷಿಸುವ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.