ಹೈದರಾಬಾದ್: ಜೂನಿಯರ್ ಎನ್‌ಟಿಆರ್, ಜಾಹ್ನವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರ ನಿರ್ವಹಿಸಿರುವ ಬಹುನಿರೀಕ್ಷಿತ ಚಿತ್ರ ''ದೇವರ: ಭಾಗ 1'' ಸೆಪ್ಟೆಂಬರ್ 27 ರಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಕೊರಟಾಲ ಶಿವ ನಿರ್ದೇಶನದ ಚಿತ್ರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶ ಕಂಡಿದೆ. ಸ್ತ್ರೀ 2 ಮತ್ತು ತುಂಬದ್‌ನಂತಹ ಹಿಂದಿ ಚಿತ್ರಗಳು ಪ್ರದರ್ಶನ ಮುಂದುವರಿಸಿದ್ದು, 'ದೇವರ' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಸಿಂಗಮ್ ಎಗೇನ್ ಮತ್ತು ಭೂಲ್ ಭುಲೈಯ್ಯಾ 3ನಂತಹ ಸಿನಿಮಾಗಳು ಬಿಡುಗಡೆ ಹೊಸ್ತಿಲಿನಲ್ಲಿದ್ದು, ಅಲ್ಲಿವರೆಗೆ 'ದೇವರ' ಒಳ್ಳೆ ಕಮಾಯಿ ಮಾಡುವ ನಿರಿಕ್ಷೆಗಳಿವೆ. ಸಿನಿಮಾಗೆ ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ.
ನಿರೀಕ್ಷೆಯಂತೆ ದೇವರ ಭಾಗ 1 ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಅದ್ಭುತ ಅಂಕಿ- ಅಂಶಗಳೊಂದಿಗೆ ಬಾಕ್ಸ್ ಆಫಿಸ್ ಪ್ರಯಾಣ ಪ್ರಾರಂಭಿಸಿದೆ. ಅಭೂತಪೂರ್ವ ಯಶ ಕಂಡಿರುವ ಈ ಚಿತ್ರ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ''ಕಲ್ಕಿ 2898 ಎಡಿ'' ಸಿನಿಮಾವನ್ನೂ ಹಿಂದಿಕ್ಕಿ ತೆಲುಗು ಮಾರುಕಟ್ಟೆಯಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ನಿರ್ಮಾಪಕರ ಪ್ರಕಾರ, ಸಿನಿಮಾ ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲಿ ವಿಶ್ವಾದ್ಯಂತ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರ ಜಾಗತಿಕವಾಗಿ 300 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಚಿತ್ರ ತಯಾರಕರು ಘೋಷಿಸಿದ್ದಾರೆ.
ಹಿಂದಿನ ದಿನಕ್ಕೆ ಹೋಲಿಸಿದರೆ ಮೂರನೇ ದಿನ ದೇವರ ಗಳಿಕೆಯಲ್ಲಿ ಏರಿಕೆಯಾಗಿದೆ. ಭಾರತದಲ್ಲಿ 40.3 ಕೋಟಿ ರೂ. ಕಲೆಕ್ಷನ್ ಮಾಡಿದೆ. ತೆಲುಗು ಮಾರುಕಟ್ಟೆಯಲ್ಲಿ 27.65 ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ. ಹಿಂದಿ ಆವೃತ್ತಿಯಿಂದ 11 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕನ್ನಡದಲ್ಲಿ 0.35 ಕೋಟಿ ರೂಪಾಯಿ ಕಮಾಯಿ ಆಗಿದೆ. ತಮಿಳು ಮತ್ತು ಮಲಯಾಳಂನಲ್ಲಿ ಕ್ರಮವಾಗಿ 1.05 ಕೋಟಿ ಮತ್ತು 0.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಮೂರು ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್ನಲ್ಲಿ ಒಟ್ಟು 161 ಕೋಟಿ ರೂ. ಕಲೆಕ್ಷನ್ ಮಾಡಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸಿನಿಮಾ ಲಭ್ಯವಿದ್ದು, ಈ ವಾರಾಂತ್ಯ ಎಷ್ಟು ಸಂಪಾದನೆಯಾಗಲಿದೆ ಎಂಬುದರ ಮೇಲೆ ಎಲ್ಲರ ಗಮನವಿದೆ.