ಹೈದರಾಬಾದ್: ಹಿರಿಯ ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರತಿಷ್ಠಿತ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಒಲಿದಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆಗಳನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಈ ಕುರಿತು ಅಧಿಕೃತವಾಗಿ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. 'ಹಿರಿಯ ನಟನ ಅಸಾಧಾರಣ ಸಿನಿಮೀಯ ಪ್ರಯಾಣ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಮಹತ್ವದ ಕೊಡುಗೆಗಳಿಗಾಗಿ ಪ್ರತಿಷ್ಟಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.
'ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ಅವರ ಸ್ಫೂರ್ತಿದಾಯಕ ಪ್ರಯಾಣವು ಮುಂದಿನ ಪೀಳಿಗೆಯನ್ನು ಪ್ರೇರೇಪಿಸುತ್ತದೆ! ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆಯ ಜ್ಯೂರಿಗಳು ದಿಗ್ಗಜ ನಟ ಮಿಥುನ್ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಾರೆ ಎಂದು ಘೋಷಿಸಲು ಹೆಮ್ಮೆ ಆಗುತ್ತಿದೆ. 2024ರ ಅಕ್ಟೋಬರ್ 8ರಂದು ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ' ಎಂದು ಅಶ್ವಿನಿ ವೈಷ್ಣವ್ ಮಾಹಿತಿ ಹಂಚಿಕೊಂಡಿದ್ದಾರೆ.
ಮಿಥುನ್ ಚಕ್ರವರ್ತಿ ಅವರು 1976ರಲ್ಲಿ ಖ್ಯಾತ ನಿರ್ದೇಶಕ ಮೃಣಾಲ್ ಸೇನ್ ಅವರ 'ಮೃಗಯಾ' ಸಿನಿಮಾ ಮೂಲಕ ನಟನಾ ವೃತ್ತಿ ಆರಂಭಿಸಿದ್ದ ಇವರಿಗೆ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ರಾಷ್ಟ್ರೀಯ ಉತ್ತಮ ನಟ ಪ್ರಶಸ್ತಿ ಒಲಿದು ಬಂದಿತ್ತು. ಬಳಿಕ 'ಡಿಸ್ಕೋ ಡ್ಯಾನ್ಸರ್', 'ಕಸಂ ಪೈದಾ ಕರ್ನೆ ವಾಲೆ ಕಿ', 'ಕಮ್ಯಾಂಡೋ', 'OMG: ಓ ಮೈ ಗಾಡ್' ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ ಅಷ್ಟೇ ಅಲ್ಲದೇ, ಬೆಂಗಾಳಿ ಚಿತ್ರರಂಗದಲ್ಲೂ ಇವರು ವಿಶೇಷ ಛಾಪು ಮೂಡಿಸಿದ್ದಾರೆ.