image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೆ.13 ರಂದು ಬಹುನಿರೀಕ್ಷಿತ “ಕಲ್ಜಿಗ” ಸಿನೆಮಾ ತೆರೆಗೆ

ಸೆ.13 ರಂದು ಬಹುನಿರೀಕ್ಷಿತ “ಕಲ್ಜಿಗ” ಸಿನೆಮಾ ತೆರೆಗೆ

ಮಂಗಳೂರು: ಈಗಾಗಲೇ ಅನೇಕ ಮಂದಿ ಕರಾವಳಿ ಸೀಮೆಯಿಂದ ಕನ್ನಡ ಚಿತ್ರರಂಗ ಪ್ರವೇಶಿಸಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಗೆಲುವನ್ನೂ ದಾಖಲಿಸಿದ್ದಾರೆ. ಇದೀಗ ‘ಕಲ್ಜಿಗ’ ಎಂಬ ಚಿತ್ರದ ಮೂಲಕ ಮತ್ತೊಂದು ತಂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಸಿನಿಮಾ ಕುರಿತು ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿಯನ್ನು ಹಂಚಿಕೊಂಡಿತು.

ನಿರ್ದೇಶಕ ಸುಮನ್ ಸುವರ್ಣ ಮಾತನಾಡಿ, “ಹಿಮಾನಿ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಕಲ್ಜಿಗ ಚಿತ್ರವನ್ನು ಶರತ್ ಕುಮಾರ್ ಎ.ಕೆ. ನಿರ್ಮಾಣ ಮಾಡಿದ್ದಾರೆ. ಬಹುಕಾಲದ ನಂತರ ನಾದಬ್ರಹ್ಮ ಹಂಸಲೇಖ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೆ ಮರಳಿದ್ದಾರೆ. ಒಳ್ಳೆಯ ಕನ್ನಡ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲರೂ ನಮ್ಮ ಸಿನಿಮಾ ನೋಡಿ“ ಎಂದರು. 

ಬಳಿಕ ಮಾತಾಡಿದ ನಟ ಅರ್ಜುನ್ ಕಾಪಿಕಾಡ್, ”ಬಿಡುಗಡೆಗೆ ಮುನ್ನ ಅಭಿಮಾನಿಗಳಿಗಾಗಿ ಪ್ರೀಮಿಯರ್ ಶೋಗಳನ್ನು ಏರ್ಪಡಿಸಲಾಗಿದೆ. ಸಿನಿಮಾ ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ನಮಗೆ ಉತ್ಸಾಹ ಹೆಚ್ಚಿದೆ. ಮುಂದಿನ ಶುಕ್ರವಾರ ಬಿಡುಗಡೆಯಾಗಲಿರುವ ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಿ“ ಎಂದರು. 

ನಟಿ ಸುಶ್ಮಿತಾ ಭಟ್ ಮಾತಾಡಿ, ”ಮೊದಲ ಬಾರಿ ನನ್ನ ನಿರ್ದೇಶಕರು ಬಂದು ಕಥೆ ಹೇಳಿದಾಗ ನನಗೆ ಕಥೆ ಕೇಳಿ ತುಂಬಾ ಖುಷಿಯಾಯಿತು. ಕೊರಗಜ್ಜ ಅನ್ನುವ ದೈವ ತುಳುನಾಡಿನಲ್ಲಿ ಮಾಡಿರುವ ಪವಾಡ ಕುರಿತು ತಿಳಿದುಕೊಂಡು ಈ ತಂಡವನ್ನು ಸೇರಿದೆ. ಚಿತ್ರೀಕರಣ ತುಂಬಾ ಚೆನ್ನಾಗಿ ನಡೆದು ಈಗ ಸಿನಿಮಾ ನೋಡಿದವರು ಹೇಳುವ ಮಾತುಗಳನ್ನು ಕೇಳಿ ಖುಷಿಯಾಗಿದೆ. ಎಲ್ಲರೂ ಸಿನಿಮಾ ನೋಡಿದಲ್ಲಿ ನಮ್ಮ ಶ್ರಮ ಸಾರ್ಥಕವಾಗಲಿದೆ“ ಎಂದರು. 

ನಿರ್ಮಾಪಕ ಶರತ್ ಕುಮಾರ್ ಎ.ಕೆ. ಮಾತಾಡಿ, ”ಕಲ್ಜಿಗ ಸಿನಿಮಾವನ್ನು ತುಂಬಾ ಪ್ರೀತಿಯಿಂದ ತಯಾರು ಮಾಡಿದ್ದೇವೆ. ತುಳುನಾಡಿನ ಜನರು, ಆಚಾರ ವಿಚಾರಗಳಿಂದ ಪ್ರೇರಣೆ ಪಡೆದು ಸಿನಿಮಾ ನಿರ್ಮಾಣ ಮಾಡಿದ್ದೇನೆ. ಸಿನಿಮಾ ನೋಡಿದ ಬಳಿಕ ಈ ಸಿನಿಮಾ ಗೆಲ್ಲುವ ಆತ್ಮವಿಶ್ವಾಸ ಹೆಚ್ಚಾಗಿದೆ. ನಾವು ಮಂಗಳೂರಿನಿಂದ ಸ್ಯಾಂಡಲ್ ವುಡ್ ಗೆ ಹೋಗುತ್ತಿದ್ದೇವೆ. ಎಲ್ಲರೂ ಪ್ರೋತ್ಸಾಹಿಸಿ“ ಎಂದರು. 

 

ಸಿನಿಮಾ ಕುರಿತು: 

ಗಿರ್ಗಿಟ್, ಸರ್ಕಸ್, ಗಮ್ಜಾಲ್ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣ `ಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತುಳು ಚಿತ್ರರಂಗದಲ್ಲಿ ಕಿಂಗ್ ಆಫ್ ಆಕ್ಷನ್ ಎಂಬ ಬಿರುದಾಂಕಿತರಾಗಿರುವ ನಟ ಅರ್ಜುನ್ ಕಾಪಿಕಾಡ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಅಪ್ಪಟ ಕನ್ನಡತಿ ಸುಶ್ಮಿತಾ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಎಸ್.ಕೆ.ಗ್ರೂಪ್ ಎಂಬ ಮಾರ್ಕೆಟಿಂಗ್ ಸಂಸ್ಥೆಯ ಮಾಲೀಕರಾಗಿರುವ ಶರತ್ ಕುಮಾರ್ ಎ.ಕೆ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಗೋಪಿನಾಥ್ ಭಟ್ , ಜ್ಯೋತಿಷ್ ಶೆಟ್ಟಿ , ಮಾನಸಿ ಸುಧೀರ್ , ವಿಜಯ್ ಶೋಭರಾಜ್ ಪಾವೂರ್ , ಶ್ಲಾಘ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ . ಪ್ರಸಾದ್ ಕೆ ಶೆಟ್ಟಿಯವರ ಹಿನ್ನೆಲೆ ಸಂಗೀತ ಚಿತ್ರದ ವೈಶಿಷ್ಟ್ಯ . 

ಶೀರ್ಷಿಕೆಯಲ್ಲಿಯೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಂತಿರುವ ಈ ಚಿತ್ರದ ಟ್ರೇಲರ್  A2 Films ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಜನರಿಂದ ಅದ್ಭುತ ಪ್ರತಿಕ್ರಿಯೆ ದೊರಕಿದೆ. ಈಗಾಗಲೇ ಕಲ್ಜಿಗ ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ ಒಟ್ಟು 14 ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಮಂಗಳೂರು, ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆಪ್ಟಂಬರ್ 13ರಂದು ಕಲ್ಜಿಗ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಡಿಕೇರಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಮುಂಬೈ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗಲಿದೆ.

ಮಂಗಳೂರು ಸೀಮೆಯ ಕನ್ನಡ ಭಾಷಾ ಶೈಲಿಯಲ್ಲಿ ಚಿತ್ರ ತಯಾರಾಗಿದೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಕಲ್ಜಿಗದಲ್ಲಿದೆ. ಸಚಿನ್ ಶೆಟ್ಟಿ ಛಾಯಾಗ್ರಹಣ, ಯಶ್ವಿನ್ ಕೆ. ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಶನಿಲ್ ಗುರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ , ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ `ಕಲ್ಜಿಗ’ಕ್ಕೆ ಕೈ ಜೋಡಿಸಿದ್ದಾರೆ.

ಕಲ್ಜಿಗಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಕೂಡ ನಿರ್ದೇಶಕರೇ ಬರೆದಿದ್ದಾರೆ.

Category
ಕರಾವಳಿ ತರಂಗಿಣಿ