ತುಳುನಾಡ ಜೀವನಾಡಿ ಸತ್ಯ, ಧರ್ಮ. ಧರ್ಮ ತಪ್ಪಿ ನಡೆದರೆ ಈ ನೆಲದ ದೈವಗಳು ಯಾವ ರೀತಿ ಶಿಕ್ಷೆ ಕೊಡುತ್ತದೆ ಎನ್ನುವ ಸಂದೇಶದೊಂದಿಗೆ ಬಂದಿರುವ 'ಧರ್ಮ ಚಾವಡಿ' ತುಳು ಚಲನಚಿತ್ರ ಮೊದಲರ್ದ ನಿಧಾನವಾಗಿ ಸಾಗಿದರೂ ಕೈಮ್ಯಾಕ್ಸ್ ಅದನ್ನು ಮರೆಸುವಂತಿದೆ. ಚಿತ್ರ ಶುರುವಾಗುವುದೇ ತುಳುನಾಡ ಪ್ರಕೃತಿಯ ಮಡಿಲಲ್ಲಿ. ಛಾಯಾಗ್ರಾಹಕ ತಮ್ಮ ಕ್ಯಾಮೆರಾ ಮೇಲಿನ ಹಿಡಿತದೊಂದಿಗೆ ದೃಶ್ಯಗಳನ್ನು ಅಂದವಾಗಿ ಸೆರೆ ಹಿಡಿದು ತೋರಿಸುವಲ್ಲಿ ತಮ್ಮ ಶ್ರಮವನ್ನು ತೋರಿಸಿದ್ದಾರೆ. ಚಿತ್ರಕಥೆಗೆ ಮೊದಲಾರ್ಧದಲ್ಲಿ ಹಲವು ಕಡೆ ಕತ್ತರಿ ಹಾಕಬೇಕಿತ್ತು ಎನ್ನಿಸದೇ ಇರದು. ಕೆಲವು ಕಡೆ ದೃಶ್ಯಗಳು ಅನಾವಶ್ಯಕ ಎಂದು ಅನ್ನಿಸಿದರೂ ಚಿತ್ರ ಅಚ್ಚುಕಟ್ಟಾಗಿ ಸಾಗುತ್ತದೆ. ಕಥೆ ಮಾಮೂಲಿಯಾಗಿ ಕಾಣಿಸಿದರೂ, ನಿರ್ದೇಶಕ ಕತೆಯೊಂದಿಗೆ ಸಾಗುವ ರೀತಿ ತಮ್ಮ ಹಿಂದಿನ ಚಿತ್ರ 'ಧರ್ಮ ದೈವ'ಕ್ಕಿಂತ ಹೆಚ್ಚು ಪಕ್ವವಾದದ್ದು ಎದ್ದು ಕಾಣುತ್ತದೆ. ಕಥೆಯಲ್ಲಿ ರಹಸ್ಯವನ್ನು ಹಿಡಿದಿಟ್ಟುಕೊಂಡು ಕೊನೆಯ ಹಂತದಲ್ಲಿ ಯಾರೂ ಊಹಿಸಲಾಗದಂತ ತಿರುವು ಪಡೆದುಕೊಳ್ಳುವ ರೀತಿ ನೋಡುಗರಿಗೆ ಒಂದು ಒಳ್ಳೆಯ ಅನುಭೂತಿ ನೀಡುತ್ತದೆ. ನಾಗವಲ್ಲಿಗೆ ಸಂಬಂಧ ವಿಲ್ಲದಿದ್ದರೂ ಒಂದು ಪಾತ್ರ ನಾಗವಲ್ಲಿಯನ್ನು ನೆನಪಿಸುವಂತಿದೆ. ಒಂದು ಆತ್ಮವನ್ನು ಆತ್ಮವಾಗಿಯೇ ತೋರಿಸಿದ್ದರೆ ಚೆನ್ನಾಗಿತ್ತು. ಅಲ್ಲಿ ಆ ಹುಡುಗಿಯ ವೇಷ ಭೂಷಣ ಬೇಡವಿತ್ತದಾರೂ ಆ ಹುಡುಗಿಯ ನಟನೆ ಮನೋಜ್ಞವಾಗಿತ್ತು. ಒಬ್ಬ ಅನುಭವಿ, ಪ್ರಬುದ್ಧ ನಟಿಗಿಂತ ತಾನೇನು ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಚಿತ್ರದ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿದ್ದು, ಎಲ್ಲೂ ಅಭಾಸವಾದಂತಿಲ್ಲ. ಇಡೀ ಚಿತ್ರಕ್ಕೆ ಹಿನ್ನಲೆ ಸಂಗೀತ ಆನೆ ಬಲ. ಹಾಡುಗಳು ಕೇಳಲು ಮುದ ಅನ್ನಿಸುತ್ತವೆ. ಇನ್ನು ದೈವವನ್ನು ತೋರಿಸಿದ ರೀತಿ ಯಾವುದೇ ವಿವಾದಕ್ಕೆ ಎಡೆ ಮಾಡದೆ ಸಾಗಿದೆ. ಒಟ್ಟಿನಲ್ಲಿ ಯಾವುದೇ ಮುಜುಗರ ಇಲ್ಲದೆ ಕುಟುಂಬ ಸಮೇತ ಕುಳಿತು ನೋಡಬಹುದಲ್ಲದೆ ನಮ್ಮ ನೆಲದ ಸಂಸ್ಕ್ರತಿಯನ್ನು ತಮ್ಮ ಮಕ್ಕಳಿಗೂ ತಿಳಿಸಬಹುದೆಂದು ಅನಿಸಿತು. ಇಂತಹ ಉತ್ತಮ ಸಂದೇಶ ಉಳ್ಳ ಚಿತ್ರಗಳನ್ನು ನೋಡಿ ಚಿತ್ರತಂಡವನ್ನು ಬೆಂಬಲಿಸಿದಾಗ ಮಾತ್ರ ಇನ್ನಷ್ಟು ಇಂತಹ ಒಳ್ಳೆಯ ಚಿತ್ರಗಳು ಬರಲು ಸಾಧ್ಯ.
✍ ಪ್ರೀತಂ ರೈ ಇಳಂತಾಜೆ